ಸಾರಿಗೆ ಸೌಲಭ್ಯವಿಲ್ಲದೆ ಪ್ರಯಾಣಿಕರ ಪರದಾಟ

ಕಲಬುರಗಿ,ಮೇ.28-ಸಂಪೂರ್ಣ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ರೀತಿಯ ಸಾರಿಗೆ ಸೌಲಭ್ಯ ಇಲ್ಲದೇ ಇದ್ದುದ್ದರಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಪ್ರಯಾಣಿಕರು ಪರದಾಡುವಂತಾಯಿತು.
ವಿವಿಧ ನಗರಗಳಿಂದ ರೈಲಿನ ಮುಖಾಂತರ ನಗರಕ್ಕೆ ಆಗಮಿಸಿದ ಪ್ರಯಾಣಿಕರು ಆಟೋ ಸಂಚಾರ ಮತ್ತು ಬಸ್ ಸಂಚಾರ ಇಲ್ಲದೇ ಇರುವುದರಿಂದ ಮಕ್ಕಳು, ಮರಿಯೊಂದಿಗೆ ಸಾಮಾನುಗಳನ್ನು ಹೊತ್ತು ನಡೆದುಕೊಂಡೇ ತಾವು ಹೋಗಬೇಕಾದ ಸ್ಥಳಕ್ಕೆ ತಲುಪಬೇಕಾಯಿತು.
ರೈಲಿನಿಂದ ಆಗಮಿಸುವ ಪ್ರಯಾಣಿಕರಿಗಾದರೂ ಅನುಕೂಲವಾಗುವಂತೆ ನಗರ ಸಾರಿಗೆ ಸೌಲಭ್ಯ ಕಲ್ಪಿಸಿದ್ದರೆ ಚೆನ್ನಾಗಿತ್ತು. ಆಟೋ, ಬಸ್ ಸಂಚಾರ ಸೇರಿದಂತೆ ಎಲ್ಲಾ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ರೈಲು ಮುಖಾಂತರ ನಗರಕ್ಕೆ ಆಗಮಿಸಿದ ಹಲವಾರು ಜನ ಪ್ರಯಾಣಿಕರು ತಮ್ಮ ನೋವು ತೋಡಿಕೊಂಡರು.
@12bc = ಊಟ, ಉಪಹಾರಕ್ಕೂ ಪರದಾಟ
ಸಂಪೂರ್ಣ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ನಗರದ ಬಹುತೇಕ ಹೋಟೆಲ್ ಗಳು ಬಾಗಿಲು ಮುಚ್ಚಿರುವುದರಿಂದ ಊಟ, ಉಪಹಾರದ ಜೊತೆಗೆ ನೀರು, ಚಹಾ ಸಹ ಸಿಗದೆ ಪ್ರಯಾಣಿಕರು ಪರಿತಪಿಸಬೇಕಾಯಿತು.
ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಿದ್ದರೂ ಬಹುತೇಕ ಹೋಟೆಲ್ ಗಳು ಬಾಗಿಲು ಮುಚ್ಚಿದ್ದರಿಂದ ಏನೇನು ಸಿಗದತಂಹ ಸ್ಥಿತಿ ನಿರ್ಮಾಣವಾಗಿತ್ತು.