ಸಾರಿಗೆ ಸಚಿವರಿಂದ ನೌಕರರ ಕುಟುಂಬಕ್ಕೆ ೧೦ ಲಕ್ಷ ರೂ. ಪರಿಹಾರ

ಬೆಂಗಳೂರು.ಜೂ.೧೩- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸೇವೆಯಲ್ಲಿದ್ದ ನೌಕರರ ೪ ಅವಲಂಭಿತರಿಗೆ ಅಪಘಾತ ಪರಿಹಾರ ವಿಮೆ ತಲಾ ರೂ.೧ ಕೋಟಿ ಒಟ್ಟು ಇಲ್ಲಿಯವರೆಗೆ ಇದೂ ಸೇರಿ ೧೭ ಸಿಬ್ಬಂದಿಗಳ ಕುಟುಂಬಕ್ಕೆ ವಿಮಾ ಸೇವೆಯನ್ನು ಸಚಿವ ರಾಮಲಿಂಗಾರೆಡ್ಡಿ ವಿತರಿಸಿದರು. ಜತೆಗೆ ನಿಗಮದ ವಾಹನಗಳಲ್ಲಿ ಪ್ರಯಾಣಿಸುತ್ತಿರುವಾಗ ಅಪಘಾತಕ್ಕೊಳಪಟ್ಟು ಮೃತರಾದ ೪ ಪ್ರಯಾಣಿಕರ ಅವಲಂಭಿತರಿಗೆ ತಲಾ ರೂ.೧೦ ಲಕ್ಷ ಪರಿಹಾರ ವಿತರಿಸಲಾಯಿತು.
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಿಗಮದ ವತಿಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಹಾಗೂ ಪ್ರಯಾಣಿಕರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಮೃತಪಟ್ಟವರ ಜೀವ ಅಮೂಲ್ಯವಾದದ್ದು, ಅದನ್ನು ಮರಳಿ ತರಲಾಗುವುದಿಲ್ಲ. ಆದರೆ ಅವರ ಕುಟುಂಬದ ಆರ್ಥಿಕ ಸ್ವಾವಲಂಬನೆಗಾಗಿ ನಿಗಮವು ರೂಪಿಸಿರುವ ಯೋಜನೆ ದೂರದೃಷ್ಠಿಯನ್ನು ಹೊಂದಿರುವುದಾಗಿ ತಿಳಿಸಿದರು. ಈ ಮೊತ್ತವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆ ಕಟ್ಟಿಕೊಳ್ಳಲು ಉಪಯೋಗಿಸಿಕೊಳ್ಳಿ , ಬೇರೆ ಇತರೆ ಎಲ್ಲೂ ಹಣ ಪೋಲು ಮಾಡದಂತೆ ಎಚ್ಚರವಹಿಸಲು ತಿಳಿಸಿದರು.
ನಿಗಮವು ಯಶಸ್ವಿಯಾಗಿ ಶಕ್ತಿ ಯೋಜನೆ ಅನುಷ್ಠಾನಗೊಳಿಸಲು ಮುಖ್ಯ ಪಾತ್ರ ವಹಿಸಿರುವ ನಿಗಮದ ಚಾಲಕರು,ನಿರ್ವಾಹಕರು, ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರುಗಳ ಪಾತ್ರ ಅಭಿನಂದನೀಯ ಎಂದು ತಿಳಿಸಿದರು. ನಿಗಮದ ವಿದ್ಯಾ ಚೇತನ ವಿದಾರ್ಥಿ ವೇತನ ಯೋಜನೆಯ ಮೊತ್ತವನ್ನು ಹೆಚ್ಚಿಸುವ ಕುರಿತು ಪರಿಶೀಲಿಸುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದರು.
ನಿಗಮದ ಅಧ್ಯಕ್ಷ ಶ್ರೀನಿವಾಸ್ ಗುಬ್ಬಿ ಮಾತನಾಡಿ, ನಿಗಮದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಶ್ರಮ ಜೀವಿಗಳಾಗಿದ್ದು ಅವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಾಗಿರುತ್ತದೆ. ಇಂದು ವಿತರಿಸಲಾಗಿರುವ ಪರಿಹಾರ ಮೊತ್ತವನ್ನು ಕುಟುಂಬ ವರ್ಗದವರು ಸಮರ್ಪಕವಾಗಿ ಬಳಸಿಕೊಂಡು ಕುಟುಂಬದ ಆರ್ಥಿಕ ಸ್ವಾವಲಂಬನೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ. ವಿ.ಅನ್ಬುಕುಮಾರ್, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಕಾರ್ಮಿಕ ಸಂಘಟನೆಗಳ ಮುಖಂಡರುಗಳಾದ ಶ್ರೀ ಅನಂತಸುಬ್ಬರಾವ್, ಶ್ರೀ ವಿಜಯಭಾಸ್ಕರ್, ಶ್ರೀ.ರೇವಪ್ಪ, ಶ್ರೀ.ಮಂಜುನಾಥ್, ಶ್ರೀ ಚಂದ್ರಶೇಖರ್, ಶ್ರೀ ನಾಗರಾಜು,ಶ್ರೀ.ವೆಂಕಟರಮಣಪ್ಪ, ಶ್ರೀ .ಜಯರಾಜ ಅರಸು ಇತರರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.