ಸಾರಿಗೆ ಸಂಸ್ಥೆ ನಿಧಾನ ಕಾರ್ಯಾರಂಭ

??????

ದೇವದುರ್ಗ.ಏ.೨೧- ಆರನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಸರ್ಕಾರದ ಕಠಿಣ ಕ್ರಮಗಳು ಪೆಟ್ಟು ನೀಡುತ್ತಿವೆ. ಹೀಗಾಗಿ ಒಬ್ಬೊಬ್ಬರಾಗಿ ಕೆಲಸಕ್ಕೆ ಹಾಜರಾಗುತ್ತಿದ್ದು, ಸಂಸ್ಥೆ ನಿಧಾನವಾಗಿ ಕಾರ್ಯಾರಂಭ ಮಾಡುತ್ತಿದೆ.
ಪಟ್ಟಣದ ಬಸ್ ಡಿಪೋದಲ್ಲಿ ೩ದಿನಗಳಿಂದ ೫ಕ್ಕೂ ಹೆಚ್ಚು ಬಸ್‌ಗಳು ವಿವಿಧ ಮಾರ್ಗದಲ್ಲಿ ಸಂಚರಿಸಿವೆ. ಅವಶ್ಯ ಇರುವ ಕಡೆ ಪೊಲೀಸ್ ಭದ್ರತೆಯಲ್ಲಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಇದಲ್ಲದೆ ಬೇರೆ ಘಟಕದ ಬಸ್‌ಗಳು ಕೂಡ ಪಟ್ಟಣಕ್ಕೆ ಬರುತ್ತಿದ್ದು, ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಧೈರ್ಯ ಬಂದಂತಾಗಿದೆ.
ಭಾನುವಾರ ಮೂರು, ಸೋಮವಾರ ಐದು ಹಾಗೂ ಮಂಗಳವಾರ ಆರು ಬಸ್‌ಗಳು ವಿವಿಧ ಮಾರ್ಗದಲ್ಲಿ ಸಂಚರಿಸಿವೆ. ದೇವದುರ್ಗ-ರಾಯಚೂರು ಮಾರ್ಗಕ್ಕೆ ಮೂರು, ಸಿರವಾರ, ತಿಂಥಣಿ, ಶಹಾಪುರಗೆ ತಲಾ ಒಂದು ಬಸ್ ಓಡಿಸಲಾಗುತ್ತಿದೆ. ಇದಲ್ಲದೆ ಶಹಾಪುರ ಘಟಕದ ೩ಬಸ್‌ಗಳು ಪಟ್ಟಣಕ್ಕೆ ಬಂದು ಹೋಗುತ್ತಿವೆ. ನಿಧಾನವಾಗಿ ಪ್ರಯಾಣಿಕರು ಬಸ್‌ಕಡೆ ಮುಖ ಮಾಡಿದ್ದು, ಖಾಸಗಿ ವಾಹನಗಳ ಹಣ ವಸೂಲಿಗೆ ಸ್ವಲ್ಪ ಕಡಿವಾಣ ಬಿದ್ದಿದೆ.
ಸಾರಿಗೆ ಸಂಸ್ಥೆ ಅಧಿಕಾರಿಗಳು, ನೌಕರರ ಮನೆಬಾಗಿಲಿಗೆ ತೆರಳಿ ಮನವೊಲಿಸುತ್ತಿದ್ದಾರೆ. ಅಂಜಿಕೆ ಅಳಕಿನಲ್ಲಿ ಕೆಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಮಫ್ತಿಯಲ್ಲಿ ಕೆಲಸಕ್ಕೆ ಬರುತ್ತಿದ್ದಾರೆ. ದಿನೇದಿನೆ ಬಸ್ ಸಂಚಾರ ಹೆಚ್ಚುತ್ತಿದ್ದು, ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಇನ್ನು ಗ್ರಾಮೀಣ ಭಾಗಕ್ಕೆ ಬಸ್ ಸಂಚರಿಸದ ಕಾರಣ ಜನರು ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.
ಪರೀಕ್ಷೆಗೆ ಹಿನ್ನಡೆ:
ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ಬಸ್ ಸಂಚಾರ ಬಂದ್ ಆಗಿ ಶಾಲಾ ಕಾಲೇಜಿಗೆ ತೆರಳು ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ಮಧ್ಯಮ ವಾರ್ಷಿಕ ಹಾಗೂ ಪೂರ್ವ ಸಿದ್ಧತೆ ಪರೀಕ್ಷೆ ಮುಂದೂಡಲಾಗಿದೆ. ಪ್ರಥಮ ಪಿಯು ವಿದ್ಯಾರ್ಥಿಗಳ ಅರ್ಧ ವಾರ್ಷಿಕ ಪರೀಕ್ಷೆ, ದ್ವಿತೀಯ ಪಿಯು ಹಾಗೂ ಡಿಗ್ರಿ ವಿದ್ಯಾರ್ಥಿಗಳ ಪೂರ್ವಸಿದ್ದತಾ ಪರೀಕ್ಷೆ ಮುಂದೂಡಲಾಗಿದೆ. ಬಸ್ ಬಂದ್‌ನಿಂದ ಮಕ್ಕಳ ಹಾಜರಾತಿಯೂ ಕುಸಿದಿದೆ.

ನೌಕರರು ಒಬ್ಬೊಬ್ಬರಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ನಾವು ನಿತ್ಯ ಮನೆಮನೆಗೆ ತೆರಳಿ ಅವರ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ. ಸದ್ಯ ರಾಯಚೂರು ಮಾರ್ಗದಲ್ಲಿ ೩, ತಿಂಥಣಿ ಬ್ರಿಡ್ಜ್, ಸಿರವಾರ, ಶಹಾಪುರ ಮಾರ್ಗದಲ್ಲಿ ತಲಾ ಒಂದು ಬಸ್ ಓಡಿಸಲಾಗುತ್ತಿದೆ.
| ಸಿದ್ದಪ್ಪ
ಸಾರಿಗೆ ಸಂಸ್ಥೆ ಡಿಪೋ ಮ್ಯಾನೇಜರ್