ಸಾರಿಗೆ ವ್ಯವಸ್ಥೆ ಶೀಘ್ರ ಕಲ್ಪಿಸಿ: ಹವಾಲ್ದಾರ್

ಧಾರವಾಡ,ಏ21: 14 ದಿನಗಳಿಂದ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ನಡೆಸುತ್ತಿದ್ದು, ರಾಜ್ಯ ಸರಕಾರ ಸಾರಿಗೆ ನೌಕರರೊಂದಿಗೆ ಮಾತುಕತೆ ಮೂಲಕ ಶೀಘ್ರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಶೀಘ್ರ ರಾಜ್ಯದ ಜನರಿಗೆ ಸಾರಿಗೆ ವ್ಯವಸ್ಥೆಯ ಅನುಕೂಲ ಮಾಡಿಕೊಡಬೇಕೆಂದು ಲೋಕತಾಂತ್ರಿಕ ಜನತಾದಳ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಫಿರೋಜಖಾನ ಹವಾಲ್ದಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಮುಷ್ಕರದಿಂದಾಗಿ ಪ್ರತಿನಿತ್ಯ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಬರುವಂತಹ ಕೂಲಿ ಕಾರ್ಮಿಕರಿಗೆ ಸಮಸ್ಯೆ ಉಂಟಾಗುತ್ತಿದ್ದು, ದುಡಿಮೆ ನಂಬಿ ಜೀವನ ಸಾಗಿಸುತ್ತಿರುವ ಕಾರ್ಮಿಕರು ಸರಕಾರಿ ಸಾರಿಗೆಯನ್ನು ಅವಲಂಬಿಸಿದ್ದು, ಈಗ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಕಳೆದ ವರ್ಷ ಲಾಕ್‍ಡೌನ ಸಂದರ್ಭದಲ್ಲಿ ಅನುಭವಿಸಿದ ಕಷ್ಟಗಳ ಸುಧಾರಣೆಯಾಗದೆ ಇನ್ನು ಮಧ್ಯಮ ಹಾಗೂ ಬಡ ಜನರು ಪರದಾಡುವಂತಾಗಿದ್ದು, ಈಗ ಮತ್ತೇ ಸಾರಿಗೆ ಮುಷ್ಕರ ಹಾಗೂ ನಿನ್ನೆ ಘೋಷಿಸಿದ ವಿಕೆಂಡ್ ಕಫ್ರ್ಯೂನಿಂದ ಸಾಮಾನ್ಯ ಜನರು ಮತ್ತೆ ನಲುಗುವಂತಾಗಿದೆ ಎಂದರು.
ಆದ್ದರಿಂದ ರಾಜ್ಯದ ಜನತೆಯ ಪರಿಸ್ಥಿತಿ ಸರಿದೂಗಿಸಬೇಕಾದರೆ ಸಾರಿಗೆ ವ್ಯವಸ್ಥೆಯನ್ನು ಶೇಕಡಾ 100 ರಷ್ಟು ಸೌಲಭ್ಯವನ್ನು ಒದಗಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರಕಾರ ಮುಷ್ಕರ ನಿರತ ಕಾರ್ಮಿಕರ ಮೇಲೆ ಕೋವಿಡ್ ನೆಪವೊಡ್ಡಿ, ಮೊಕದ್ದಮೆಗಳನ್ನು ದಾಖಲಿಸಿದ್ದು ಪ್ರಜಾಪ್ರಭುತ್ವ ಕಗ್ಗೋಲೆ. ಕೂಡಲೇ ಸರಕಾರ ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೈನುದ್ದೀನ್ ಖಾನ, ಎಂ.ಹೆಬ್ಬಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.