ಸಾರಿಗೆ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಡಾ. ರಾಜೇಂದ್ರ ಕೆ.ವಿ.

ಮಂಗಳೂರು, ಎ.೮- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ಅನಿರ್ಧಿಷ್ಟ ಅವಧಿಯ ಮುಷ್ಕರದ ನಡೆಸುತ್ತಿರುವುದರಿಂದ ಜಿಲ್ಲೆಯ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಯನ್ನು ಕಲ್ಪಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ.

ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಾರಿಗೆ ಮತ್ತು ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಎಸ್ಸಾರ್ಟಿಸಿ ನೌಕರರು ಬೇಡಿಕೆಗಳ ಈಡೇರಿಕೆ ಕುರಿತು ಅನಿರ್ಧಿಷ್ಟ ಮುಷ್ಕರದ ಹಿನ್ನೆಲೆ ಸಾರ್ವಜನಿಕರ ಸಂಚಾರಕ್ಕೆ ಅನಾನೂಕೂಲ ವಾಗದಂತೆ ಸೂಕ್ತ ವಾಹನಗಳ ವ್ಯವಸ್ಥೆಗಳನ್ನು ಮಾಡಬೇಕೆಂದು ಪೊಲೀಸ್, ಆರ್‌ಟಿಒ ಹಾಗೂ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಯಾವುದೇ ಪ್ರಯಾಣಿಕ ಮ್ಯಾಕ್ಸಿ ಕ್ಯಾಬ್, ಖಾಸಗಿ ಬಸ್ ವಿಮಾ ನೋಂದಣಿ ಹೊಂದಿ ಸಂಚಾರಕ್ಕೆ ಯೋಗ್ಯವಾಗಿದ್ದು, ಚಾಲಕನು ನಿಗದಿತ ವಾಹನ ಚಾಲನಾ ಪತ್ರವನ್ನು ಹೊಂದಿದ್ದರೆ ತಾತ್ಕಾಲಿಕ ರಹದಾರಿ ಪಡೆದು ಅಥವಾ ಪಡೆಯದೆ ಸಾರ್ವಜನಿಕರ ಅಗತ್ಯಕ್ಕೆ ತಕ್ಕಂತೆ ಚಾಲನೆ ಮಾಡಬಹುದು. ಖಾಸಗಿ ವಾಹನಗಳಲ್ಲಿ ಪ್ರಯಾಣಿಕರಿಂದ ದುಬಾರಿ ದರವನ್ನು ಪಡೆಯುವಂತಿಲ್ಲ, ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದ ಡಿಸಿ, ವಾಹನಗಳಲ್ಲಿ ಸಂಚರಿಸುವಾಗ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಚಾಲಕರು ಹಾಗೂ ನಿರ್ವಾಹಕರು ಎಚ್ಚರ ವಹಿಸಬೇಕು. ತಪ್ಪಿದ್ದಲ್ಲಿ ವಾಹನ ಮಾಲಕರಿಂದಲೇ ದಂಡ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು. ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಕೆಎಸ್ಸಾರ್ಟಿಸಿ ಪುತ್ತೂರು ಹಾಗೂ ಮಂಗಳೂರು ವಿಭಾಗಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯುವುದರ ಜೊತಗೆ ಸಹಾಯವಾಣಿಯನ್ನು ಆರಂಭಿಸಿ ಬರುವ ದೂರುಗಳನ್ನು ನೋಂದಣಿ ಮಾಡಿಕೊಳ್ಳುವುದರೊಂದಿಗೆ ಸೂಕ್ತ ಕ್ರಮ ಕಲ್ಪಿಸಿಕೊಡಬೇಕು ಎಂದು ಡಿಸಿ ಸೂಚಿಸಿದರು. ಈ ಸಂದರ್ಭ ದ.ಕ.ಜಿಲ್ಲಾ ಎಸ್ಪಿ ಸೋನಾವಣೆ ರಿಷಿಕೇಶ್ ಭಗವಾನ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ. ವರ್ಣೆಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಮಲ್ಲೇಸ್ವಾಮಿ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್, ಖಾಸಗಿ ಬಸ್ ಮಾಲಕರ ಸಂಘ, ಮ್ಯಾಕ್ಸಿಕ್ಯಾಬ್ ಮಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.