ಸಾರಿಗೆ ಲಾಂಛನ ಕಾನೂನು ಹೋರಾಟಕ್ಕೆ ತೀರ್ಮಾನ

ಬೆಂಗಳೂರು,ಜೂ. ೩- ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಕೆಎಸ್‌ಆರ್‌ಟಿಸಿ ಎಂಬ ಶಬ್ಧವನ್ನು ಬಳಸಬಾರದು ಎಂದು ಟ್ರೇಡ್‌ಮಾರ್ಕ್ ರಿಜಿಸ್ಟ್ರಿಯ ತೀರ್ಪು ನೀಡಿರುವ ಮಾಹಿತಿ ಬಂದಿದೆ. ಈ ಬಗ್ಗೆ ಅಧಿಕೃತವಾಗಿ ತೀರ್ಪಿನ ಪ್ರತಿ ಲಭ್ಯವಾದ ನಂತರ ರಾಜ್ಯದ ಮುಂದಿನ ನಿಲುವು ಮತ್ತು ಕಾನೂನು ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರೂ ಆದ ಲಕ್ಷ್ಮಣ ಸವದಿ ಹೇಳಿದ್ದಾರೆ.
ಕೆಎಸ್‌ಆರ್‌ಟಿಸಿ ಟ್ರೇಡ್‌ಮಾರ್ಕ್‌ಗೆ ಸಂಬಂಧಿಸಿದಂತೆ ಬಂದಿರುವ ತೀರ್ಪನ್ನು ಯಾವುದೇ ರಾಜ್ಯಗಳು ಪ್ರತಿಷ್ಠೆಯನ್ನಾಗಿ ಮಾಡಿಕೊಳ್ಳಬಾರದು. ಇದು ಕೇರಳಕ್ಕೇನೋ ಸಂಭ್ರಮ ಪಡುವಂತಹ ವಿಚಾರವೇನಲ್ಲ. ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ ಎಂಬ ಹೆಸರಿದ್ದರೆ ಅದರಿಂದ ಕೇರಳ ರಾಜ್ಯದ ಕೆಎಸ್‌ಆರ್‌ಟಿಸಿಗೆ ನಷ್ಟವೇನಿಲ್ಲ. ಕರ್ನಾಟಕವೂ ಕೇರಳ ಸಾರಿಗೆ ಸಂಸ್ಥೆಯೊಂದಿಗೆ ಯಾವೊತ್ತೂ ಪೈಪೋಟಿಗೆ ಇಳಿದಿಲ್ಲ ಎಂಬುದನ್ನು ಕೇರಳ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ದುರಾದೃಷ್ಟವಶಾತ್ ಈ ವಿವಾದ
ಅನಗತ್ಯವಾಗಿ ಎದ್ದಿದೆ. ಖಾಸಗಿ ಸಂಸ್ಥೆಗಳಲ್ಲಾದರೆ ಈ ರೀತಿಯ ಹೆಸರು ಅಥವಾ ಟ್ರೇಡ್‌ಮಾರ್ಕ್‌ಗಳು ಅವರ ವ್ಯವಹಾರ ಮತ್ತು ಲಾಭಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಸರ್ಕಾರಿ ಸಂಸ್ಥೆಗಳ ವಿಚಾರದಲ್ಲಿ ಇದು ಅನ್ವಯಿಸಲ್ಲ. ಏಕೆಂದರೆ ಸರ್ಕಾರಿ ಸಂಸ್ಥೆಗಳಿಗೆ ಜನರ ಸೇವೆಯೇ ಮುಖ್ಯ. ಲಾಭಗಳಿಸುವ ಮೇಲಾಟ ಅಥವಾ ಸ್ಪರ್ಧೆ ಅಮುಖ್ಯ. ಸಾರ್ವಜನಿಕ ಹಿತಾಸಕ್ತಿ ಮತ್ತು ಸೇವೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದಿದ್ದಾರೆ.
ನಮ್ಮದು ಒಕ್ಕೂಟ ವ್ಯವಸ್ಥೆ ಈ ವ್ಯವಸ್ಥೆಯಲ್ಲಿ ಒಂದು ರಾಜ್ಯವು ಮತ್ತೊಂದು ರಾಜ್ಯದ ಜತೆಗೆ ಯಾವುದೇ ಸಂಘರ್ಷವಿಲ್ಲದೆ ಸೌಹಾರ್ದಯುತವಾಗಿ ಸಂಬಂಧವಿಟ್ಟುಕೊಳ್ಳಬೇಕು ಎಂಬುದು ಒಕ್ಕೂಟ ವ್ಯವಸ್ಥೆ ಹೇಳುತ್ತದೆ. ಹಾಗಾಗಿ, ಕರ್ನಾಟಕ-ಕೇರಳ ಸಾರಿಗೆಯಲ್ಲಿ ಪೈಪೋಟಿ ಏನಿಲ್ಲ ಎಂದರು.
ಇಂತಹ ವಿಷಯಗಳಲ್ಲಿ ಅನಗತ್ಯವಾಗಿ ವಿವಾದಗಳನ್ನು ಹೆಚ್ಚು ಮಾಡುತ್ತ ಪರಸ್ಪರ ರಾಜ್ಯಗಳಲ್ಲಿ ವಿವಾದಗಳನ್ನು ಬೆಳೆಸುವ ಪರಿಪಾಠಕ್ಕೆ ನಾವೆಲ್ಲರೂ ಅಂತ್ಯ ಹಾಡಬೇಕು. ದೇಶದ ಹಿತದೃಷ್ಟಿಯಿಂದ ರಾಜ್ಯರಾಜ್ಯಗಳ ನಡುವಿನ ಬಾಂಧವ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಮುಖ್ಯವಾದದ್ದು ಎಂದು ಹೇಳಿದ್ದಾರೆ.