
ಗಂಗಾವತಿ ಏ.08: ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಎಸ್ ಆರ್ ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಬಸ್ ಮತ್ತು ಪ್ರಯಾಣಿಕರು ಇಲ್ಲದೇ ಬಿಕೋ ಎನ್ನುತ್ತಿರುವ ದೃಶ್ಯ ಕಂಡುಬಂತು.
ಗಂಗಾವತಿ ವಿಭಾಗೀಯ ಘಟಕದ ವ್ಯಾಪ್ತಿಯಲ್ಲಿ ನಿತ್ಯ 100 ಬಸ್ ಗಳು ಓಡಾಡುತ್ತಿದ್ದವು. ಬುಧವಾರ ಒಂದೇ ಬಸ್ ಸಂಚರಿಸಿದ್ದು, ಗುರುವಾರ ಯಾವುದೇ ಬಸ್ ರಸ್ತೆಗೆ ಇಳಿಯಲಿಲ್ಲ. ಇದರಿಂದ ರಾಯಚೂರು, ಕೊಪ್ಪಳ, ಬಳ್ಳಾರಿಗೆ ಹೋಗುವ ಪ್ರಯಾಣಿಕರು ಪರದಾಡಿದರು. ಖಾಸಗಿ ವಾಹನ ಸಂಚಾರ ಇದ್ದರೂ ಜನರು ಅಷ್ಟಾಗಿ ಒಲವು ತೋರಲಿಲ್ಲ.
ಸಂಜೆವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಕೆಎಸ್ ಆರ್ ಟಿಸಿ ಗಂಗಾವತಿ ವಿಭಾಗದ ವ್ಯವಸ್ಥಾಪಕ ಸಂಜೀವ್ ಮೂರ್ತಿ ಅವರು, ನೌಕರರ ಮನವೊಲಿಸಲು ಪ್ರಯತ್ನ ನಡೆದಿದೆ. ಆದರೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಬುಧವಾರ ಒಂದೇ ಬಸ್ ಸಂಚರಿಸಿದ್ದು, ಇಂದು ಯಾವು ಬಸ್ ಓಡಾಡಿಲ್ಲ. ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಖಾಸಗಿ ವಾಹನ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.