ಸಾರಿಗೆ ಮುಷ್ಕರ ೨ನೇ ದಿನಕ್ಕೆ-ಖಾಸಗಿ ವಾಹನಗಳ ಮೊರೆಹೋದ ಪ್ರಯಾಣಿಕರು

ಸುಳ್ಯ, ಎ.೯- ಆರನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಸರಕಾರಿ ಸಾರಿಗೆ ನೌಕರರ ಪ್ರತಿಭಟನೆ ೨ನೇ ದಿನಕ್ಕೆ ಮುಂದುವರೆದಿದ್ದು, ಈ ಮುಷ್ಕರದ ಹಿನ್ನೆಲೆಯಲ್ಲಿ ಸುಳ್ಯದಲ್ಲೂ ಸರ್ಕಾರಿ ಬಸ್ಸುಗಳು ಗುರುವಾರ ಕೂಡಾ ಓಡಾಟ ನಡೆಸಿಲ್ಲ.
ಸರ್ಕಾರವು ಖಾಸಗಿ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಿದ್ದು, ಸುಳ್ಯ ಸರ್ಕಾರಿ ಬಸ್ಸು ನಿಲ್ದಾಣದಲ್ಲಿ ಖಾಸಗಿ ವಾಹನಗಳು ಪ್ರಯಾಣಿಕರ ಸೇವೆಗೆ ನಿಂತ ದೃಶ್ಯ ಕಂಡುಬಂದಿತ್ತು. ನಿನ್ನೆಯ ದಿನ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು ಗುರುವಾರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು ಕಂಡುಬರುತ್ತಿದೆ.
ಮಧ್ಯಾಹ್ನದ ಬಳಿಕ ರಸ್ತೆಗಿಳಿದ ೨ ಸರ್ಕಾರಿ ಬಸ್ಸು
ಸರ್ಕಾರಿ ಸಾರಿಗೆ ನೌಕರರ ಮುಷ್ಕರದ ಮಧ್ಯೆಯು ಪುತ್ತೂರು ಡಿಪೋದಿಂದ ೨ ಸರಕಾರಿ ಬಸ್ಸುಗಳು ಓಡಾಟ ಆರಂಭಿಸಿರುವುದಾಗಿ ತಿಳಿದುಬಂದಿದೆ. ನಿವೃತ್ತಿ ಅಂಚಿನಲ್ಲಿರುವ ಇಬ್ಬರು ಚಾಲಕರು ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಈ ಬಸ್ಸುಗಳು ಓಡಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ.