ಸಾರಿಗೆ ಮುಷ್ಕರ: ಸೇನೆಯಿಂದ ಚಾಲಕರ ಕರೆತರಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು,ಏ.೮- ರಾಜ್ಯ ರಸ್ತೆ ಸಾರಿಗೆ ನೌಕರರ ಅನಿರ್ಧಿಷ್ಟಾವಧಿಯ ಮುಷ್ಕರದಿಂದ ಸಾರ್ವಜನಿಕರಿಗೆ ಉಂಟಾಗುವ ತೊಂದರೆ ತಪ್ಪಿಸಲು ಅಗತ್ಯ ಬಿದ್ದರೇ ಸೇನೆಯಿಂದ ಚಾಲಕರನ್ನು ಕರೆತರುತ್ತೇವೆ ಎಂದು ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ತಿಳಿಸಿದ್ದಾರೆ.
ಪ್ರಯಾಣಿಕರಿಗೆ ತೊಂದರೆಯಾಗದಂತೆ ಮುಷ್ಕರ ನಡೆಸಬೇಕು. ಅದನ್ನು ಬಿಟ್ಟು ಹೀಗೆ ಅನಿರ್ಧಿಷ್ಟಾವಧಿಯ ಮುಷ್ಕರ ನಡೆಸಿ ಸಾರ್ವಜನಿಕರಿಗೆ ತೊಂದರೆ ಮಾಡಬಾರದು. ಈ ರೀತಿ ಯಾವುದೇ ಪ್ರತಿಭಟನೆ ಈ ಹಿಂದೆ ನಡೆಸಿಲ್ಲ. ಒಂದು ವೇಳೆ ಅಗತ್ಯ ಬಿದ್ದರೇ ಸೇನೆಯಿಂದ ಚಾಲಕರನ್ನು ಕರೆತರುತ್ತೇವೆ ಎಂದರು.
ಈ ಮೂಲಕವೂ ಸಾರಿಗೆ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ಕ್ರಮ ಕೈಗೊಳ್ಳುವ ಯೋಚನೆ ಕೂಡ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವಂತ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ೧೧ ಗಂಟೆಯವರೆಗೆ ಕೆಎಸ್‌ಆರ್ ಟಿ ೭೭ ಬಸ್,ಬಿಎಂಟಿಸಿ ೪೨ ಬಸ್, ಎನ್ ಇಕೆಆರ್ ಟಿಸಿ ೭೬ ಬಸ್ ಹಾಗೂ ಎನ್ ಡಬ್ಲ್ಯೂ ಕೆಆರ್ ಟಿಸಿ ೧೫ ಬಸ್ ಗಳು ಸಂಚರಿಸಿವೆ. ಗೃಹ ಸಚಿವರು ಕೂಡ ಕರ್ತವ್ಯಕ್ಕೆ ಹಾಜರಾಗುವ ‘ಸಾರಿಗೆ ಸಿಬ್ಬಂದಿ’ಗೆ ರಕ್ಷಣೆ ನೀಡಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಹೀಗಿದ್ದೂ ಸಾರಿಗೆ ನೌಕರರು ಮಾತ್ರ ಮುಷ್ಕರದಿಂದ ಹಿಂದೆ ಸರಿಯುತ್ತಿಲ್ಲ. ತಮ್ಮ ಬೇಡಿಕೆ ಈಡೇರಿಕೆಗಾಗಿ ಬಿಗಿ ಪಟ್ಟು ಹಿಡಿದು ಅನಿರ್ಧಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದಾರೆ.
ಈ ಸಂಬಂಧ ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಮಾತನಾಡಿ, ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಹೀಗೆ ಈ ಹಿಂದೆ ಯಾವಾಗ್ಲೂ ಆಗಿಲ್ಲ. ರಾಜ್ಯ ಸರ್ಕಾರ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ಆಗುತ್ತಿರುವಂತ ಸಮಸ್ಯೆ ಪರಿಹರಿಸಲು ಮುಂದಾಗುತ್ತಿದೆ.
ಅದಕ್ಕಾಗಿ ೨ ವರ್ಷಗಳ ಹಿಂದೆ ಸಾರಿಗೆ ಇಲಾಖೆಯಿಂದ ನಿವೃತ್ತರಾಗಿರುವಂತ ನೌಕರರ ಪಟ್ಟಿಯನ್ನು ಮಾಡಲಾಗುತ್ತಿದೆ. ಆ ನೌಕರರನ್ನು ಮತ್ತೆ ಕರೆಸಿ, ಸಾರಿಗೆ ಬಸ್ ಸಂಚಾರ ಯಥಾಸ್ಥಿತಿಗೆ ತರುವಂತ ಪ್ರಯತ್ನಕ್ಕೂ ಚಿಂತನೆ ನಡೆಸಿದೆ ಎಂದರು.
ಹೀಗೆ ಮುಷ್ಕರ ನಡೆಸುವುದು ಸರಿಯಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ಹಿಂದೆ ಎರಡು ಮೂರು ದಿನಗಳಲ್ಲಿ ಮಾತುಕತೆ ಮೂಲಕ ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡ ನಿದರ್ಶನಗಳಿವೆ.
ಆದರೇ ಈಗ ನಡೆಯುತ್ತಿರುವ ಮುಷ್ಕರ ಆ ರೀತಿಯದ್ದಲ್ಲ. ಏಕೆ ಹೀಗೆ ನಡೆಸುತ್ತಿದ್ದಾರೋ ಗೊತ್ತಿಲ್ಲ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಿತ್ತು. ಒಂದು ವೇಳೆ ಅಗತ್ಯ ಬಿದ್ದರೇ ಸೇನೆಯಿಂದ ಚಾಲಕರನ್ನ ಕರೆತಂದು, ಸಾರಿಗೆ ಸಂಚಾರ ಆರಂಭಿಸುವಂತ ಚಿಂತನೆ ಕೂಡ ನಡೆಸಲಾಗುತ್ತಿದೆ ಎಂದು ತಿಳಿಸಿದರು.