ಸಾರಿಗೆ ಮುಷ್ಕರ : ಖಾಸಗಿ ವಾಹನಗಳಿಗೆ ಹಬ್ಬ – ದುಪ್ಪಟ್ಟು ದರ

ರಾಯಚೂರು.ಏ.07- ಸಾರಿಗೆ ನೌಕರರ ಮುಷ್ಕರ ಖಾಸಗಿ ವಾಹನಗಳಿಗೆ ಜಾತ್ರೆಯ ಸಂಭ್ರಮ ತಂದಿದ್ದು, ಪ್ರಯಾಣ ದರ ಬೆಳಗಾಗುತ್ತಿದ್ದಂತೆ ದುಪ್ಪಟ್ಟು ಮಾಡಿ, ಪ್ರಯಾಣಿಕರನ್ನು ಸುರಿಯುವ ಕಾರ್ಯ ಯಥೇಚ್ಛವಾಗಿ ನಡೆದಿದೆ.
ತುರ್ತು ಪ್ರಯಾಣದ ಹಿನ್ನೆಲೆಯಲ್ಲಿ ಜನರು ಮುಷ್ಕ ನಿರತ ಸಾರಿಗೆ ಬಿಟ್ಟು ಖಾಸಗಿ ವಾಹನಗಳ ಸಂಚಾರವನ್ನು ಅವಲಂಬಿಸುವಂತಾಗಿದೆ. ಯಾವುದೇ ವಾಹನಗಳ ಸಂಚಾರ ಇಲ್ಲಿದಿರುವುದು ಮತ್ತು ಈ ಮುಷ್ಕರ ಅನಿರ್ಧಿಷ್ಟಾವಧಿ ಕಾಲದವರೆಗೆ ಘೋಷಿಸಿದ್ದರಿಂದ ದೂರದ ಊರುಗಳಿಂದ ಬಂದ ಜನ ಮರಳಿ ತಮ್ಮ ಊರುಗಳಿಗೆ ತೆರಳಲು ಖಾಸಗಿ ವಾಹನಗಳೇ ಗತಿ ಎನ್ನುವಂತಹ ಪರಿಸ್ಥಿತಿ ಒದಗಿ ಬಂದಿದೆ. ಪ್ರಯಾಣಿಕರ ಅನಿವಾರ್ಯತೆಯನ್ನು ಖಾಸಗಿ ಜೀಪ್ ಮತ್ತು ಟೆಂಪೋಗಳು ಬಂಡವಾಳವಾಗಿಸಿಕೊಂಡು ಒಂದಕ್ಕೆ ಎರಡು ಪಟ್ಟು ದರ ನಿಗದಿ ಪಡಿಸಲಾಗಿದೆ.
ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗವಿಲ್ಲದೇ, ಜನ ದುಪ್ಪಟ್ಟು ಪ್ರಯಾಣ ಬೆಲೆತೆತ್ತು ಸಂಚರಿಸುವುದು ಅನಿವಾರ್ಯವಾಗಿದೆ. ಖಾಸಗಿ ವಾಹನಗಳಿಗೆ ಜನರು ಮುಗಿಬಿದ್ದಿದ್ದರು. ಮಾನ್ವಿ, ದೇವದುರ್ಗ, ಲಿಂಗಸೂಗೂರು, ಸಿಂಧನೂರು ಹೀಗೆ ದೂರದ ಊರುಗಳಿಗೂ ಟೆಂಪೂಗಳ ಓಡಾಟದ ವ್ಯವಸ್ಥೆ ಮಾಡಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಲೆಕ್ಕವೇ ಇಲ್ಲದೇ, ಟೆಂಪೋಗಳಲ್ಲಿ ಮತ್ತು ಕ್ರೂಷರಗಳಲ್ಲಿ ಜನರನ್ನು ತುಂಬಲಾಗುತ್ತಿತ್ತು. ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ವಿಸ್ತರಿಸಿಕೊಳ್ಳುವ ಆತಂಕದ ಬಗ್ಗೆ ಯಾವುದೇ ಲೆಕ್ಕವಿಲ್ಲದಂತೆ ಜನರು ಟೆಂಪೋಗಳಲ್ಲಿ ಒಬ್ಬರ ಮೇಲೆ ಒಬ್ಬರು ಮುಗಿಬಿದ್ದು, ಸಂಚರಿಸುವಂತಹ ಅಪಾಯವನ್ನು ಬಸ್ ಮುಷ್ಕರ ತಂದೊಡ್ಡಿತ್ತು.