ಸಾರಿಗೆ ಮುಷ್ಕರ:ಸರ್ಕಾರದ ಬೇಜವಾಬ್ದಾರಿತನದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ

ಕಲಬುರಗಿ:ಎ.7:ಇಂದು ರಾಜ್ಯದಾದ್ಯಂತ ಸಾರಿಗೆ ನೌಕರರು ತಮ್ಮ ಹಲವಾರು ಬೇಡಿಕೆಗಳನ್ನಿಟ್ಟುಕೊಂಡು ಸಾರಿಗೆ ಮುಷ್ಕರಕ್ಕೆ ಕರೆನೀಡಿದ್ದು, ಅದೇ ಸಂದರ್ಭದಲ್ಲಿ ರಾಜ್ಯದಾದ್ಯಂತ ಪದವಿ ಹಾಗೂ ಇಂಜನಿಯರಿಂಗ್ ವಿದ್ಯಾರ್ಥಿಗಳ ಪರೀಕ್ಷೆಯು ನಡೆಯುತ್ತಿದೆ. ಈ ಮುಷ್ಕರದ ಮಾಹಿತಿಯು ಮುಂಚಿತವಾಗಿಯೇ ತಿಳಿದಿದ್ದರೂ ಸಹ ಸರ್ಕಾರವು ಏನೂ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನದಿಂದ ವರ್ತಿಸಿರುವುದರಿಂದ ಪರೀಕ್ಷಾ ಸ್ಥಳಕ್ಕೆ ತೆರಳಲು ಬಸ್ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ರಾಜ್ಯದ ಸುಮಾರು 80%ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಬಸ್ ಮೇಲೆಯೇ ಅವಲಂಬಿರಾಗಿದ್ದಾರೆ.

ಇದರ ನಡುವೆ ಕೆಲವು ವಿಶ್ವವಿದ್ಯಾನಿಲಯಗಳು ಪರಿಸ್ಥಿತಿಯನ್ನು ಅರಿತುಕೊಂಡು ಪರೀಕ್ಷೆಗಳನ್ನು ಮುಂದೂಡಿದೆ. ಆದರೆ ವಿಟಿಯು ಸೇರಿದಂತೆ ಕೆಲವು ವಿಶ್ವವಿದ್ಯಾನಿಲಯಗಳು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಬದಲಿಗೆ ಸರ್ಕಾರ ಹಾಗೂ ವಿಶ್ವವಿದ್ಯಾನಿಲಯವು ಅವರನ್ನು ಗೊಂದಲಕ್ಕೆ ತಳ್ಳಿರುವುದು ಖಂಡನಾರ್ಹ. ಅಲ್ಲದೆ, ಕೆಲವು ವಿಶ್ವವಿದ್ಯಾನಿಲಗಳು ಪರೀಕ್ಷೆಗಳನ್ನು ಮುಂದೂಡಿ, ಕಾಲೇಜಿಗೆ ರಜೇ ಘೋಷಿಸಿ ಹಾಸ್ಟೆಲ್‍ನಿಂದ ವಿದ್ಯಾರ್ಥಿಗಳನ್ನು ತಮ್ಮ ಊರಿಗೆ ವಾಪಸ್ಸು ತೆರಳಲು ಹೇಳಿದ್ದಾರೆ, ಆದರೆ ಊರಿಗೆ ಹೋಗಲು ಸರಿಯಾದ ಬಸ್ ವ್ಯವಸ್ಥೆ ಇರದ ಕಾರಣ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ವಿಶ್ವವಿದ್ಯಾನಿಲಯಗಳು ತುರ್ತಾಗಿ ಚರ್ಚಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯು ಆಗ್ರಹಿಸುತ್ತದೆ ಎಂದು ಹಣಮಂತ.ಎಸ್.ಎಚ್ , ಜಿಲ್ಲಾ ಅಧ್ಯಕ್ಷರು ,ಈರಣ್ಣಾ ಇಸಬಾ ಜಿಲ್ಲಾ ಕಾರ್ಯದರ್ಶಿಗಳು,ಎಐಡಿಎಸ್‍ಓ ಕಲಬುರಗಿ ತಿಳಿಸಿದ್ದಾರೆ.