ಚಿಕ್ಕನಾಯಕನಹಳ್ಳಿ, ಜೂ. ೧೭- ಪಟ್ಟಣಕ್ಕೆ ವಿದ್ಯಾರ್ಜನೆಗಾಗಿ ಶಾಲಾ ಕಾಲೇಜಿಗಳಿಗೆ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶದಿಂದ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ಬರುತ್ತಿದ್ದು, ಶಾಲಾ ಸಮಯದಲ್ಲಿ ಬಸ್‌ಗಳ ಸೌಲಭ್ಯವಿರುವುದಿಲ್ಲ. ಇದರಿಂದ ಶೆಟ್ಟಿಕೆರೆ, ಹಂದನಕೆರೆ, ಬರಗೂರು, ಸಾಸಲು, ಕಾತ್ರಿಕೆಹಾಳ್, ಜಾಣೆಹಾರ್, ತೀರ್ಥಪುರ, ಮತಿಘಟ್ಟ ಭಾಗದಿಂದ ಚಿಕ್ಕನಾಯಕನಹಳ್ಳಿ, ತಿಪಟೂರು ಹಾಗೂ ತುರುವೇಕೆರೆ ಕಡೆಗೆ ಶಾಲಾ ಅವಧಿಯಲ್ಲಿ ಬಸ್‌ಗಳ ಸೌಲಭ್ಯವಿಲ್ಲದೆ ತೀವ್ರ ತೊಂದರೆಯಾಗಿರುವುದರಿಂದ ಈ ಭಾಗಗಳಿಗೆ ಬಸ್ ಸೌಕರ್ಯ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತುಮಕೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಅಪ್ಪುಪಾಟೀಲ್, ಜಿಲ್ಲಾ ಸಂಚಾಲಕ ಗಣೇಶ್, ತಾಲ್ಲೂಕು ಸಂಚಾಲಕ ಗುರುಪ್ರಸಾದ್, ಮಾಧ್ಯಮ ಪ್ರಮುಖ್ ದೀಪಕ್, ಕಾರ್ಯಕರ್ತರಾದ ಜಿತೇಂದ್ರ, ಅಭಿಲಾಷ್, ಆಕಾಶ್, ಶಿವಕುಮಾರ್, ಸಿದ್ದೇಶ್, ನಾಗೇಂದ್ರ, ಸಚಿನ್, ವೇದಮೂರ್ತಿ ಸೇರಿದಂತೆ ನೂರಾರು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.