ಸಾರಿಗೆ ಬಸ್-ಬೈಕ್ ಡಿಕ್ಕಿ; ಮೂವರು ಸಾವು

ಚಾಮರಾಜನಗರ: ಬೈಕ್ ಹಾಗೂ ಸಾರಿಗೆ ಸಂಸ್ಥೆ ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಇಂದು ಸಂಜೆ 6.45ರ ಸುಮಾರಿಗೆ ನಗರದ ಹೊರವಲಯದಲ್ಲಿ ಇರುವ ಮರಿಯಾಲ ಮೇಲು ಸೇತುವೆಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಓರ್ವ ಮಹಿಳೆ ಸೇರಿ ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ.

ಮೃತರನ್ನು ತಾಲೂಕಿನ ಚೆನ್ನಿಪುರಮೋಳೆ ಗ್ರಾಮದವರು ಎಂದು ಹೇಳಲಾಗುತ್ತಿದೆ. ಮೂರು ಮಂದಿ ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ, ವಾಹನವೊಂದನ್ನು ಹಿಂದಿಕ್ಕಲು ಮುಂದಾಗಿ ಎದುರಿನಿಂದ ಬಂದ ಸಾರಿಗೆ ಸಂಸ್ಥೆ ಬಸ್​ಗೆ ಬೈಕ್ ಡಿಕ್ಕಿಯಾಗಿದೆ ಎನ್ನಲಾಗಿದೆ‌.
ಚಾಮರಾಜನಗರದ ಚೆನ್ನಿಪುರಮೋಳೆ ಗ್ರಾಮದ ಅಶೋಕ್(27), ಹೆಗ್ಗೋಠಾರ ಗ್ರಾಮದ ಶಾಂತಮಲ್ಲಪ್ಪ (55), ಇವರ ಪತ್ನಿ ಅನಿತಾ (45) ಮೃತಪಟ್ಟವರು. ಚಾಮರಾಜನಗರ ಆಸ್ಪತ್ರೆಗೆ ಬರಲು ಬಸ್ಸಿಗಾಗಿ ಕಾಯುತ್ತಿದ್ದ ದಂಪತಿಗೆ ಡ್ರಾಪ್ ಕೊಡಲು ಅಶೋಕ್ ಹತ್ತಿಸಿಕೊಂಡಿದ್ದ ಎನ್ನಲಾಗಿದೆ‌
ಚಾಮರಾಜನಗರ ಮೆಡಿಕಲ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹಗಳನ್ನು ರವಾನಿಸಲಾಗಿದೆ. ಮೃತದೇಹಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಚಾಮರಾಜನಗರ ಸಂಚಾರಿ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ‌.
.