ಜೇವರಗಿ/ಯಡ್ರಾಮಿ,ಜೂ 26: ಮಹಿಳೆಯರಿಂದ ತುಂಬಿ ತುಳುಕುತ್ತಿದ್ದ ಸರ್ಕಾರಿ ಬಸ್‍ನಲ್ಲಿ ತಳ್ಳಾಟ-ನೂಕಾಟದಿಂದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಮ್ಮನಸಿರಸಗಿ ಗ್ರಾಮದ ಬಳಿ ನಡೆದಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಜೇವರ್ಗಿ ಬಸ್‍ಭರ್ತಿಯಾಗಿತ್ತು. ವಸ್ತಾರಿ ಗ್ರಾಮದ ಪ್ರಥಮ ಪಿಯು ವಿದ್ಯಾರ್ಥಿನಿ ಶರಣಮ್ಮ ಇದೇ ಬಸ್‍ನಲ್ಲಿ ವಸ್ತಾರಿಯಿಂದ ಜೇವರ್ಗಿಗೆ ಕಾಲೇಜಿಗೆ ಹೊರಟಿದ್ದಳು. ಬಸ್‍ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ತಳ್ಳಾಟ-ನೂಕಾಟ ಸಂಭವಿಸಿದೆ. ಇದರಿಂದ ಮಧ್ಯದಲ್ಲಿ ಸಿಲುಕಿದ್ದ ವಿದ್ಯಾರ್ಥಿನಿ ಶರಣಮ್ಮ ಅಸ್ವಸ್ಥಳಾಗಿದ್ದಾಳೆ.
ನಂತರ ವಿದ್ಯಾರ್ಥಿನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಕುಮ್ಮನಸಿರಸಗಿ ಗ್ರಾಮದ ಬಳಿ ವಿದ್ಯಾರ್ಥಿಗಳು ಬಸ್ ತಡೆದು ಗ್ರಾಮಕ್ಕೆ ಹೆಚ್ಚಿನ ಬಸ್‍ಗಳನ್ನು ಬಿಡುವಂತೆ ಆಗ್ರಹಿಸಿದ್ದಾರೆ.
ಬಸ್ ತಡೆದು ಪ್ರತಿಭಟನೆ:
ಜೇವರ್ಗಿ ತಾಲೂಕಿನ ರೇವನೂರು ಗ್ರಾಮದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಬಸ್ಸು ಬಿಡದೆ ಕಾರಣ ಮತ್ತು ನಾಲ್ಕು ಊರುಗಳು ಸೇರಿಕೊಂಡು ಒಂದು ಬಸ್ಸು ಬಿಟ್ಟಿರುವದರಿಂದ ಬಸ್ ಭರ್ತಿಯಾದ್ದರಿಂದ ಐವತ್ತು ಅರವತ್ತು ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಊರಲ್ಲೇ ಉಳಿಯುತ್ತಿದ್ದಾರೆ ಆದ್ದರಿಂದ ಮಾವನೂರು ಗ್ರಾಮಕ್ಕೆ ಪ್ರತ್ಯೇಕ ಒಂದು ಬಸ್ಸು ಬಿಡುವಂತೆ ಒತ್ತಾಯಿಸಿ ಬಸ್ ತಡೆದು ಪ್ರತಿಭಟನೆ ಮಾಡಲಾಯಿತು.
ಕಾಂಗ್ರೆಸ್ ನೇತೃತ್ವ ಸರ್ಕಾರದ ಶಕ್ತಿ ಯೋಜನೆ ಅಡಿ ರಾಜ್ಯದಲ್ಲಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಬಸ್‍ಗಳು ರಶ್ ಆಗಿವೆ. ಇದರಿಂದ ಸೀಟ್‍ಗಾಗಿ ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಹಾಗೆ ನಿರ್ವಾಹಕ ಹಾಗೂ ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೋಗುವವರು ಸೇರಿದಂತೆ ದಿನನಿತ್ಯದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.