ಸಾರಿಗೆ ಬಸ್‌ನಲ್ಲಿ ನಾಯಿಗೆ ಅರ್ಧ ಟಿಕೆಟ್

ಬೆಂಗಳೂರು,ನ.೨- ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಲಗೇಜು ಸಾಗಾಣೆಯ ನಿಯಮಗಳು ಮಾರ್ಪಾಡು ಮಾಡಲು ತೀರ್ಮಾನಿಸಲಾಗಿದ್ದು, ಅದರಂತೆ. ಇನ್ನುಮುಂದೆ ನಾಯಿ ಮತ್ತು ನಾಯಿಯ ಮರಿಗೆ ಅರ್ಧ ಟಿಕೆಟ್ ದರವನ್ನು ವಿಧಿಸುವಂತೆ ತಿಳಿಸಲಾಗಿದೆ.
ಪ್ರಯಾಣಿಕರ ಬೇಡಿಕೆಯ ಮೇರೆಗೆ ಕೆಎಸ್‌ಆರ್ಟಿಸಿ, ಶ್ವಾನದ ಪ್ರಯಾಣ ಟಿಕೆಟ್ ದರವನ್ನು ಕಡಿತಗೊಳಿಸಿದೆ. ಈ ಹಿಂದೆ ಸಾಕು ಪ್ರಾಣಿಯು ಮರಿಯಾಗಿದ್ದರೂ ಕೂಡ ಫುಲ್ ಟಿಕೆಟ್ ವಿಧಿಸಲಾಗುತ್ತಿತ್ತು. ಇದೀಗ ನಿಗಮ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದು, ಅದರಂತೆ ಬಸ್‌ಗಳಲ್ಲಿ ಕೊಂಡೊಯ್ಯುವ ಎಲ್ಲ ಸಾಕು ಪ್ರಾಣಿಗೂ ತಲಾ ಅರ್ಧ ಟಿಕೆಟ್ ದರ ವಿಧಿಸಲಾಗುವುದು ಎಂದು ತಿಳಿಸಿದೆ.
ನಾನ್‌ಎಸಿ ಬಸ್‌ಗಳಲ್ಲಿ ಸಾಕು ಪ್ರಾಣಿ ಜೊತೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಕರ್ನಾಟಕ ವೈಭವ, ರಾಜಹಂಸ, ನಾನ್ ಎಸಿ ಸ್ಲೀಪರ್ ಮತ್ತು ಎಸಿ ಬಸ್‌ಗಳಲ್ಲಿ ಕೊಂಡೊಯ್ಯುವ ಹಾಗಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸಾಮಾನ್ಯ ವೇಗದೂತ, ನಗರ ಹೊರವಲಯ ಬಸ್‌ಗಳಲ್ಲಿ ನಾಯಿ ಸಾಗಾಣಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಬಸ್‌ನಲ್ಲಿ ಯದ್ವಾತದ್ವಾ ಲಗೇಜ್ ಸಾಗಾಣಿಕೆಗೆ ಬ್ರೇಕ್ ಹಾಕಲಾಗಿದೆ. ಪ್ರತಿ ಪ್ರಯಾಣಿಕರ ೩೦ ಕೆಜಿ ಲಗೇಜ್ ಕೊಂಡೊಯ್ಯಲು ಅವಕಾಶವಿದ್ದು, ೩೦ ಕೆಜಿಗಿಂತ ಹೆಚ್ಚು ಸಾಗಾಣಿಕೆಗೆ ಹೆಚ್ಚುವರಿ ದರ ವಿಧಿಸಲು ಕೆಎಸ್ ಆರ್ ಟಿಸಿ ಆದೇಶಿಸಿದೆ.
ವೈಯಕ್ತಿಕವಾಗಿ ಕೊಂಡೊಯ್ಯುವ ಲಗೇಜ್ ಗರಿಷ್ಟ ೩೦ ಕೆಜಿ ತೂಕ ಇದ್ದರೆ ಉಚಿತವಾಗಿ ಸಾಗಿಸಬಹುದು.. ಒಂದು ವೇಳೆ ೩೦ಕೆಜಿಗಿಂತ ಮೀರಿದರೆ ನಿಗದಿತ ದರ ವಿಧಿಸಲಾಗುತ್ತದೆ ಎಂದು ತಿಳಿಸಿದೆ.ಹಾಗಿದ್ದರೆ ಯಾವ ಎಲ್ಲಾ ವಸ್ತುಗಳನ್ನು ಸಾಗಿಸಬಹುದು ಎಂದು ನೊಡುವುದಾದರೆ ಬ್ಯಾಗ್, ಸೂಟ್ ಕೇಸ್, ಅಕ್ಕಿ, ತೆಂಗಿನಕಾಯಿ, ರಾಗಿ, ಅಕ್ಕಿ ಹಿಟ್ಟು, ತರಕಾರಿ, ಹೂ ಹಣ್ಣು, ಸಣ್ಣದಾದ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಸಾಗಾಟ ಮಾಡಬಹುದಾಗಿದೆ.
ಹಾಗೂ ಪ್ರಯಾಣಿಕರ ನೆಚ್ಚಿನ ನಾಯಿಯನ್ನು ಬಸ್‌ನಲ್ಲಿ ಸಾಗಿಸುವ ಅನುಮತಿ ದೊರಕಿದೆ. ಹೌದು ನಿಮ್ಮ ನೆಚ್ಚಿನ ಪ್ರಾಣಿ ಇನ್ನು ಮುಂದೆ ನೆಚ್ಚಿನ ಸಾಕು ನಾಯಿಗೆ ಟಿಕೆಟ್ ಖರೀದಿಸಿ ಪ್ರಯಾಣ ಮಾಡಬಹುದಾಗಿದೆ/ ಕೆಎಸ್‌ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರು ತಮ್ಮ ಸಾಕು ಪ್ರಾಣಿಗಳಾದ ಮೊಲ, ಶ್ವಾನ, ಬೆಕ್ಕು, ಪಕ್ಷಿಗಳನ್ನು ಕೊಂಡೊಯ್ಯಬಹುದು. ಈ ಮುಂಚೆ ಫುಲ್ ಟಿಕೆಟ್ ದರ ವಿಧಿಸಲಾಗುತ್ತಿತ್ತು.