ಸಾರಿಗೆ ನೌಕರ ಮುಷ್ಕರ:ಖಾಸಗಿ ವಾಹನಗಳ ಮಾಲೀಕರು ತಾತ್ಕಾಲಿಕ ರಹದಾರಿ ಪಡೆಯಲು ಸೂಚನೆ

ಕಲಬುರಗಿ,ಏ.6:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಇದೇ ಏಪ್ರಿಲ್ 7 ರಿಂದ ಅನಿರ್ದಿಷ್ಠಾವಧಿಗೆ ಮುಷ್ಕರ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ಮೋಟಾರು ವಾಹನ ಕಾಯ್ದೆ 1988 ನಿಯಮ 87(1)(ಸಿ) ರಡಿ ಕಲಬುರಗಿ ಜಿಲ್ಲೆಯ ಖಾಸಗಿ ಪ್ರಯಾಣಿಕ ವಾಹನಗಳಾದ ಮ್ಯಾಕ್ಸಿಕ್ಯಾಬ್, ಕಾಂಟ್ರ್ಯಾಕ್ಟ್ಟ್ ಕ್ಯಾರೇಜ್ ಬಸ್, ಶಾಲಾ ಬಸ್ ಹಾಗೂ ಪಿಎಸ್‍ವಿ ಬಸ್‍ಗಳಿಗೆ ಸಾರಿಗೆ ಇಲಾಖೆಯಿಂದ ಒಂದು ತಿಂಗಳ ಅವಧಿಗೆ (ಟೆಂಪರರಿ ಪರ್ಮಿಟ್) ತಾತ್ಕಾಲಿಕ ರಹದಾರಿ ನೀಡಲಾಗುತ್ತಿದೆ ಎಂದು ಕಲಬುರಗಿ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಉಪ ಸಾರಿಗೆ ಆಯುಕ್ತ ಬಿ. ನೂರ್ ಮಹಮ್ಮದ್ ಬಾಷಾ ಅವರು ತಿಳಿಸಿದ್ದಾರೆ.

   ಈ ಸಂಬಂಧ ಖಾಸಗಿ ಪ್ರಯಾಣಿಕ ವಾಹನಗಳಾದ ಮ್ಯಾಕ್ಸಿಕ್ಯಾಬ್, ಕಾಂಟ್ರ್ಯಾಕ್ಟ್ ಕ್ಯಾರೇಜ್ ಬಸ್, ಶಾಲಾ ಬಸ್ ಹಾಗೂ ಪಿಎಸ್‍ವಿ ಬಸ್‍ಗಳ ಮಾಲೀಕರು ಸಂಬಂಧಪಟ್ಟ ದಾಖಲೆಗಳೊಂದಿಗೆ ಕಲಬುರಗಿ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಸಂಪರ್ಕಿಸಿ ದಿನಾಂಕ: 07-04-2021 ರಿಂದ 06-05-2021 ರವರೆಗೆ ಒಂದು ತಿಂಗಳದ ಅವಧಿಗೆ ತಾತ್ಕಾಲಿಕ ರಹದಾರಿ  (ಟೆಂಪರರಿ ಪರ್ಮಿಟ್) ಪಡೆದು ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ತಿಳಿಸಿದ್ದಾರೆ.