ಸಾರಿಗೆ ನೌಕರರ ಹೋರಾಟ ಹತ್ತಿಕ್ಕುವುದು ಬಿಡಲು ಆಗ್ರಹ: ಸಾಬರೆಡ್ಡಿ

ಯಾದಗಿರಿ:ಎ.18: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಹೋರಾಟ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡದೇ ಅವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಬೇಕೆಂದು ಕೆಪಿಸಿಸಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸಾಬರೆಡ್ಡಿ ಕಲಬುರ್ಗಿ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ವಾರಕ್ಕಿಂತಲೂ ಹೆಚ್ಚು ದಿನಗಳಿಂದ ಮುಷ್ಕರದಲ್ಲಿ ನಿರತರಾಗಿದ್ದರೂ ಅವರ ಸಮಸ್ಯೆ ಆಲಿಸಲು ಸರ್ಕಾರ ಮುಂದಾಗದೇ ಇರುವುದು ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ತೋರಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕರು ನಿತ್ಯ ಕಾಯಕವನ್ನು ಮಾಡಿಯೇ ಮನೆಗೆ ಹೋಗುವ ಕಾಯಕ ನಿಷ್ಠರಾಗಿದ್ದು ಅವರ ಸಮಸ್ಯೆಗಳನ್ನು ಆಲಿಸುವ ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೇವಲ 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡುವಂತೆ ಅವರು ಆಗ್ರಹಿಸುತ್ತಿದ್ದು ಇದು ನ್ಯಾಯಯುತವಾದ ಬೇಡಿಕೆಯಾಗಿದ್ದು, ಸರ್ಕಾರ ಕೂಡಲೇ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ರಾಜ್ಯದ ಜನತೆ ಕೊರೋನಾದಿಂದ ಸಂಕಷ್ಟಕ್ಕೆ ಈಡಾಗುತ್ತಿರುವ ಮದ್ಯೆಯೇ ಸಾರಿಗೆ ಮುಷ್ಕರದಿಂದ ಜೀವನ ಅಸ್ತವ್ಯಸ್ತಗೊಂಡಿದೆ. ಇದನ್ನು ಸರ್ಕಾರ ಮನಗಾಣಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ಸರ್ಕಾರ ಕೂಡಲೇ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಅವರೊಂದಿಗೆ ಮಾತುಕತೆಗೆ ಮುಂದಾಗಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಇಲ್ಲವಾದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದಿಂದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.