ಸಾರಿಗೆ ನೌಕರರ ಸೇವೆ ಪ್ರಶಂಸೆಗೆ ಮನವಿ

ಕೋಲಾರ,ಏ.೨೦: ಕೊರೋನಾ ರೋಗವು ರಾಜ್ಯದ ಜನತೆಗೆ ತಂದೊಡ್ಡಿರುವ ಭಯಂಕರ ಆಘಾತದ ಸಂದರ್ಭದಲ್ಲಿ ರಾಜ್ಯ ಸಾರಿಗೆ ನೌಕರರು ತಮ್ಮ ಸೇವೆಯ ಮಹತ್ವವನ್ನು ಎತ್ತಿ ಹಿಡಿದು ಸೇವಾ ಕೈಂಕರ್ಯವನ್ನು ಮೆರೆಯಬೇಕೆಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ಕಳೆದ ೧೨ ದಿನಗಳಿಂದ ತಮ್ಮ ಮತ್ತು ಕುಟುಂಬದ ಹಿತಾಸಕ್ತಿಯಿಂದ ಸರಕಾರದ ಮೇಲೆ ಒತ್ತಡ ತರಲು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರದಲ್ಲಿ ನಿರತರಾಗಿದ್ದೀರಿ. ಈ ಅವಧಿಯಲ್ಲಿ ಕೊರೊನಾ ರೋಗವು ರಾಜ್ಯದಲ್ಲಿ ತನ್ನ ಕ್ರೌರ್ಯವನ್ನು ಮೆರೆಯತೊಡಗಿದೆ. ರಾಜ್ಯದಲ್ಲಿ ೧೧% ಬೆಂಗಳೂರು ನಗರ ಒಂದರಲ್ಲಿಯೇ ೮% ಜನರು ಸಾವಿಗೀಡಾಗಿದ್ದಾರೆ. ಈ ಆಘಾತದಿಂದ ಜನ ಭಯಭೀತರಾಗಿದ್ದಾರೆ. ಇದನ್ನು ನಿಯಂತ್ರಿಸಲು ಸರಕಾರ ಮತ್ತು ಆಡಳಿತ ವ್ಯವಸ್ಥೆಗಳು ಆಹೋರಾತ್ರಿ ಶ್ರಮಿಸಿದರೂ ನಿಯಂತ್ರಿಸಲಾಗುತ್ತಿಲ್ಲ. ಸಂಪೂರ್ಣ ಜನ ಜೀವನ ಅಸ್ತವ್ಯಸ್ತವಾಗಿದೆ, ಕಳೆದ ೧೪ ತಿಂಗಳಿನಿಂದ ರಾಜ್ಯದಲ್ಲಿ ಮಕ್ಕಳ ವಿಧ್ಯಾಭ್ಯಾಸವೂ ಶೂನ್ಯವಾಗಿದೆ. ಈ ವರ್ಷದ ಪರೀಕ್ಷಾ ಅವಧಿಯಲ್ಲಿ ತಮ್ಮ ಮುಷ್ಕರದಿಂದ ಸರ್ಕಾರ ಪರೀಕ್ಷೆಗಳನ್ನು ಮುಂದೂಡಿದೆ. ರೈತರು ತಮ್ಮ ಉತ್ಪನ್ನಗಳಾದ ಹಾಲು, ತರಕಾರಿ, ಹಣ್ಣು, ಹೂವು ಇನ್ನು ಮುಂತಾದಗಳನ್ನು ಸಾಗಾಣಿಕೆ ಮಾಡಲಾಗದೆ ಹಾಗೂ ವೃದ್ಧರು, ಗರ್ಭಿಣಿಯರು, ಬಾಣಂತಿಯರು, ರೋಗಿಗಳು ಮತ್ತು ಸರ್ಕಾರಿ ಸಾರಿಗೆ ಬಸ್ಸುಗಳನ್ನು ನಂಬಿ ದಿನ ನಿತ್ಯ ತಮ್ಮ ಬದುಕು ಸಾಗಿಸುತ್ತಿರುವ ಅನೇಕರು ಬಡವರು ಸಾರಿಗೆ ನೌಕರರ ಮುಷ್ಕರದಿಂದ ಇವರ ಬದುಕು ತಲ್ಲಣಿಸಿ ಹೋಗಿದೆ ಎಂದು ಆರೋಪಿಸಿದರು.
ಪ್ರಸಕ್ತ ಸಂದರ್ಭದಲ್ಲಿ ತಮ್ಮ ನೈತಿಕತೆಯನ್ನು ಮರೆತು ಸತ್ಯಾಗ್ರಹದ ಆಶಯಗಳನ್ನು ಗಾಳಿಗೆ ತೂರಿ ತಮ್ಮ ಚಳುವಳಿಯ ನೇತಾರರ ಕುಚೋದ್ಯಗಳಿಗೆ ಒಳಗಾಗಿ ತಮ್ಮ ಕುಟುಂಬಸ್ತರನ್ನು, ಮಕ್ಕಳನ್ನು ಮಾಡಬಾರದ ಕೆಲಸಗಳಲ್ಲಿ ತೊಡಗಿಸಿದಿರಿ. ಆಹಾರ, ಆಶ್ರಯ, ಅಂಗವಿಕಲತೆ, ಆರೋಗ್ಯ, ದುಡಿಯುವ ಸಮರ್ಥತೆಗಳ ಮೂಲದಲ್ಲಿ ಕೊರತೆಗಳಿದ್ದಲ್ಲಿ ಮಾತ್ರ ಭಿಕ್ಷಾಟನೆ ಮಾಡುವ ಯೋಗ್ಯತೆ ಬರುತ್ತದೆ. ಇವಾವುಗಳು ನಿಮಗೆ ಇಲ್ಲದಿದ್ದಾಗ್ಯೂ ತಮ್ಮ ಮಕ್ಕಳ ಕುಟುಂಬಸ್ತರ ನೈತಿಕತೆಯನ್ನು ಅಂಧಪತನ ಮಾಡಿದ್ದೀರಿ. ಇದು ಕ್ಷಮೇಯೇ ಇಲ್ಲದ ದುರ್ವತನೆ. ಇದಕ್ಕೆ ನೀವು ಕಾರಣರಲ್ಲ ನಿಮ್ಮನ್ನು ದಾರಿ ತಪ್ಪಿಸಿದ ನಿಮ್ಮ ಮುಖಂಡರ ನೈತಿಕ ದಿವಾಳಿತನ ಮತ್ತು ಅವರ ತಾರ್ಕಿಕ ಬದುಕನ್ನು ಎತ್ತಿ ತೋರಿಸುತ್ತದೆ ಎಂದರು.
ನಿಯೋಗದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬೆಡಶೆಟ್ಟಹಳ್ಳಿ ರಮೇಶ್, ತಾಲ್ಲೂಕು ಅಧ್ಯಕ್ಷ ಕೆ. ಅನಂದ್ ಕುಮಾರ್, ರೈತ ಮುಖಂಡ ಬಿಸನಹಳ್ಳಿ ಬೈಚೇಗೌಡ, ತಾಲ್ಲೂಕು ಕಾರ್ಯಾಧ್ಯಕ್ಷ ವಾನರಾಶಿ ಗೋಪಾಲ್, ಕಠಾರಿಪಾಳ್ಯ ರಮೇಶ್, ಕಲ್ಯಾಣ್, ಮುನಿರಾಜು ಇನ್ನು ಇತರರು ಬಾಗವಹಿಸಿದ್ದರು.