ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ ಸಿಐಟಿಯು ಆಗ್ರಹ

ಉಡುಪಿ, ಎ.೨೧- ಕಳೆದ ಹದಿನೈದು ದಿನಗಳಿಂದ ಕೆಎಸ್‌ಆರ್‌ಟಿಸಿ ನೌಕರರು ನಡೆಸುತ್ತಿರುವ ಹೋರಾಟಕ್ಕೆ ತನ್ನ ಸೌಹಾರ್ಧ ಬೆಂಬಲ ವ್ಯಕ್ತಪಡಿಸಿರುವ ಸಿಐಟಿಯು ಉಡುಪಿ ಹಾಗೂ ಕುಂದಾಪುರ ಸಂಚಲನ ಸಮಿತಿ, ಮುಖ್ಯಮಂತ್ರಿ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ತಪಡಿಸಬೇಕೆಂದು ಆಗ್ರಹಪಡಿಸಿದೆ.

ಈ ಕುರಿತು ಉಡುಪಿ ಹಾಗೂ ಕುಂದಾಪುರದ ಕೆಎಸ್‌ಆರ್‌ಟಿಸಿ ಡಿಪೋ ಮೇನೇಜರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಒತ್ತಾಯಿಸ ಲಾಯಿತು. ಕರ್ನಾಟಕದ ಸಾರಿಗೆ ನೌಕರರ ಪರಿಸ್ಥಿತಿ ಹೀನಾಯ ಸ್ಥಿತಿಯಲ್ಲಿದೆ. ಅತ್ಯಂತ ಕಡಿಮೆ ವೇತನ ಭತ್ಯೆಗಳು ಮಾತ್ರವಲ್ಲ, ಅಧಿಕಾರಿಗಳಿಂದ ನೌಕರರಿಗೆ ಅದರಲ್ಲೂ ಮಹಿಳಾ ನೌಕರರಿಗೆ ನಿತ್ಯ ಕಿರುಕುಳ, ಕೆಲಸ ನಿರಾಕರಣೆ, ವಿವಿಧ ರೀತಿಯ ದಂಡಗಳ ಹಿಂಸೆಗಳು, ದೌರ್ಜನ್ಯ ಮತ್ತು ವ್ಯಾಪಕವಾದ ಭ್ರಷ್ಟಚಾರ ದಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ಒತ್ತಡ ತಾಳಲಾರದೇ ಹಲವಾರು ನೌಕರರು ಆತ್ಮಹತ್ಯಗೆ ಶರಣರಾಗುತ್ತಿರುವುದು ಅತ್ಯಂತ ಕಳವಳದ ಸಂಗತಿ ಎಂದು ಮನವಿಯಲ್ಲಿ ದೂರಲಾಗಿದೆ. ಸರಕಾರ ಮತ್ತು ಮುಖ್ಯಮಂತ್ರಿಗಳು ಈ ಅನಿರ್ದಿಷ್ಟವಾದ ಹೋರಾಟವನ್ನು ಅಂತ್ಯಗೊಳಿಸಲು ಕೂಡಲೇ ಸಾರಿಗೆ ನಿಗಮಗಳಲ್ಲಿ ಕ್ರಿಯಾಶೀಲವಾಗಿರುವ ಮತ್ತು ನೊಂದಾವಣೆಯಾಗಿರುವ ಎಲ್ಲಾ ನೌಕರರ ಸಂಘಗಳ ಜೊತೆ ಮಾತುಕತೆ ನಡೆಸಿ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿರುವ ನೌಕರರ

ಬದುಕನ್ನು ಉತ್ತಮ ಪಡಿಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಉಡುಪಿ ನಿಯೋಗದಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಪ್ರಧಾನ ಕಾರ್ಯದರ್ಶಿ ಕವಿರಾಜ್, ಸಮಿತಿ ಸದಸ್ಯ ಮೋಹನ್ ಮತ್ತು ಕುಂದಾಪುರ ನಿಯೋಗದಲ್ಲಿ ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಮಹಾಬಲ ವಡೇರ ಹೋಬಳಿ, ದಾಸ ಭಂಡಾರಿ, ಸಂತೋಷ ಹೆಮ್ಮಾಡಿ, ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.