ಸಾರಿಗೆ ನೌಕರರ ವೇತನ ಪರಿಷ್ಕರಣೆ

ಬೆಂಗಳೂರು,ಸೆ.೧೬- ನೆನೆಗುದಿಗೆ ಬಿದ್ದಿರುವ ರಾಜ್ಯರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ಮಾಡಲು ರಾಜ್ಯಸರ್ಕಾರ ಬದ್ಧವಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವಿಧಾನ ಪರಿಷತ್‌ನಲ್ಲಿಂದು ಹೇಳಿದ್ದಾರೆ.
೨೦೧೬ರಲ್ಲಿ ರಾಜ್ಯದ ೪ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ಪರಿಷ್ಕರಣೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯತನಕ ವೇತನ ಪರಿಷ್ಕರಣೆಯಾಗಿಲ್ಲ. ನೌಕರರ ಬೇಡಿಕೆಯೂ ಇದೆ. ಅದಕ್ಕೆ ಸ್ಪಂದಿಸಲು ಸರ್ಕಾರವೂ ಸಿದ್ಧವಿದೆ. ಈಗಾಗಲೇ ಮುಖ್ಯಮಂತ್ರಿಗಳು ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು.ಟಿ.ಎಸ್ ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ೪ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ವರದಿಯನ್ನೂ ನೀಡಿದೆ. ಅದರ ಪರಿಶೀಲನೆ ಹಂತದಲ್ಲಿದ್ದು, ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಲು ಸಿದ್ಧವಿರುವುದಾಗಿ ಅವರು ತಿಳಿಸಿದರು.ರಾಜ್ಯದಲ್ಲಿ ಪ್ರತಿನಿತ್ಯ ೪ ಸಾರಿಗೆ ನಿಗಮಗಳಿಂದ ೧೫ ಕೋಟಿ ರೂ. ಮೊತ್ತದ ಡೀಸಲ್ ಬಳಕೆಯಾಗುತ್ತಿದೆ. ೯೦ ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಬಸ್ ಟಿಕಟ್‌ನ ಪ್ರಯಾಣ ದರ ಹೆಚ್ಚಳ ಮಾಡಬೇಕಾಗಿತ್ತು. ಕಾರಣಾಂತರಗಳಿಂದ ಮಾಡಲಾಗಿಲ್ಲ.ಡೀಸಲ್ ದರ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗಳನ್ನು ಸಾರಿಗೆ ನಿಗಮಗಳು ಎದುರಿಸುತ್ತಿದ್ದರೂ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.ಕೋವಿಡ್ ಸೇರಿದಂತೆ ಇನ್ನಿತರ ಕಾರಣಗಳಿಂದ ಸಾರಿಗೆ ನಿಗಮಗಳು ನಷ್ಟ ಅನುಭವಿಸಿದವು. ಇದಕ್ಕಾಗಿ ಸರ್ಕಾರ ೪ ನಿಗಮಗಳಿಗೆ ಸರಿಸುಮಾರು ೧೨ ಸಾವಿರ ಕೋಟಿ ರೂ.ಗಳನ್ನು ನೀಡಿದೆ ಎಂದು ಹೇಳಿದರು.
ನಿವೃತ್ತ ರಾಜ್ಯದ ಸಾರಿಗೆ ನಿಗಮಗಳನ್ನು ಲಾಭದಾಯವಾಗಿ ಕೊಂಡೊಯ್ಯಲು ಹಾಗೂ ಸಂಪನ್ಮೂಲ ಕ್ರೂಢೀಕರಣಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ನೀಡಿದ್ದು, ಅದರ ಪರಿಶೀಲನೆ ಹಂತದಲ್ಲಿದೆ ಎಂದು ಹೇಳಿದರು.ರಾಜ್ಯ ಸಾರಿಗೆ ನಿಗಮಗಳ ವೇತನ ಪರಿಷ್ಕರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಸ್ವತಃ ಆಸಕ್ತಿ ವಹಿಸಿದ್ದಾರೆ. ಹೀಗಾಗಿ ನೌಕರರು ವೇತನ ಪರಿಷ್ಕರಣೆ ಬಗ್ಗೆ ಅನುಮಾನ ಇಟ್ಟುಕೊಳ್ಳುವುದು ಬೇಡ ಎಂದು ಅವರು ಹೇಳಿದರು.
ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ೨೦೨೦-೨೧ ಸಾಲಿನವರೆಗೆ ಹಾಗೂ ೨೦೨೧-೨೨ನೇ ಸಾಲಿನಲ್ಲಿ ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆ ಮೊತ್ತಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದರು.