ಸಾರಿಗೆ ನೌಕರರ ವಿರುದ್ಧ ಎಸ್ಮಾ ಬ್ರಹ್ಮಾಸ್ತ್ರ

Transport depr strike meeting sr officers meeting

ಬೆಂಗಳೂರು,ಏ.೬- ರಾಜ್ಯ ಸಾರಿಗೆ ಸಂಸ್ಥೆ ನೌಕರರ ಶೇ. ೮ ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಸಿದ್ಧವಿದೆ. ಅದನ್ನೂ ಮೀರಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದರೆ ಮುಷ್ಕರನಿರತ ನೌಕರರ ವಿರುದ್ಧ ಎಸ್ಮಾ ಬ್ರಹ್ಮಾಸ್ತ್ರ ಪ್ರಯೋಗಿಸಲು ಸರ್ಕಾರ ಹಿಂದೆ-ಮುಂದೆ ನೋಡದು ಎಂದು ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರು ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನೌಕರರ ಬೇಡಿಕೆ ಈಡೇರಿಕೆ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರಿಗಳ ತುರ್ತು ಸಭೆಯ ನಂತರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಕಾರ್ಯದರ್ಶಿ ರವಿಕುಮಾರ್‌ರವರು ಸಾರಿಗೆ ನೌಕರರ ಶೇ. ೮ರಷ್ಟು ವೇತನ ಸರ್ಕಾರ ಏರಿಕೆಗೆ ಸಮ್ಮತಿ ಸೂಚಿಸಲಾಗಿದೆ. ೬ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ನೀಡಲು ಸಾಧ್ಯವಿಲ್ಲ. ಸರ್ಕಾರಿ ನೌಕರರೆಂದೂ ಸಾರಿಗೆ ನೌಕರರ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈಗ ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಚುನಾವಣಾ ಆಯೋಗ ಅನುಮತಿ ನೀಡಿದರೆ ವೇತನ ಹೆಚ್ಚಳ ಘೋಷಣೆ ಮಾಡುತ್ತೇವೆ. ಇಲ್ಲದಿದ್ದರೆ ಚುನಾವಣೆ ಮುಗಿದ ಬಳಿಕ ವೇತನ ಏರಿಕೆ ಪ್ರಕಟಿಸಲಾಗುವುದು ಎಂದರು.
ಇಷ್ಟೆಲ್ಲಾ ಮೀರಿ ನೌಕರರು ಮುಷ್ಕರಕ್ಕೆ ಮುಂದಾದರೆ ಅವರ ವಿರುದ್ದ ಎಸ್ಮಾಗಿಂತ ಮಿಗಿಲಾದ ಕಠಿಣ ಕಾನೂನುಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ ಅವರು, ನೌಕರರ ಜತೆ ಮತ್ತೆ ಸಂಧಾನ ಸಭೆಯನ್ನಾಗಲಿ ಚರ್ಚೆಯನ್ನಾಗಲಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾರಿಗೆ ಸಂಸ್ಥೆಗೆ ಪ್ರತಿನಿತ್ಯ ೪ ಕೋಟಿ ರೂ. ನಷ್ಟವಾಗುತ್ತಿದೆ. ಆಗಿದ್ದರೂ ನೌಕರರಿಗೆ ಸಂಬಳ ನೀಡುತ್ತಿದ್ದೇವೆ. ನೌಕರರು ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಕೋವಿಡ್ ಪರಿಸ್ಥಿತಿಯಲ್ಲಿ ಮುಷ್ಕರ ನಡೆಸಬಾರದು ೯ ಬೇಡಿಕೆಗಳಲ್ಲಿ ೮ ಬೇಡಿಕೆ ಈಡೇರಿಸಿದ್ದೇವೆ. ೬ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಸಾಧ್ಯವಿಲ್ಲ. ಆದರೆ, ಶೇ. ೮ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಸಿದ್ಧ ಎಂದು ಪುನರುಚ್ಛರಿಸಿದರು.
ಸಾರಿಗೆ ನೌಕರರು ಅನಿರ್ದಿಷ್ಟಾವದಿ ಮುಷ್ಕರಕ್ಕೆ ಮುಂದಾದರೆ ಅದನ್ನು ನಿರ್ವಹಣೆ ಮಾಡಲಿಕ್ಕೆ ಸಾರಿಗೆ ಇಲಾಖೆ ಸಿದ್ಧವಿದೆ. ಇಡೀ ರಾಜ್ಯದಲ್ಲಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಪರಿಮಿಟ್ ಇಲ್ಲದಿದ್ದರೂ ಅನುಮತಿ ನೀಡುತ್ತಿದ್ದೇವೆ. ಈ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌ಗಳಿಗೆ ದರ ನಿಗದಿ ಮಾಡುತ್ತೇವೆ ಎಂದರು.
ಖಾಸಗಿ ಬಸ್, ಸ್ಕೂಲ್ ಬಸ್‌ಗಳನ್ನೂ ಯಾರು ಬೇಕಾದರೂ ನಾಳೆ ಓಡಿಸಬಹುದು. ಯಾರಾದರು ಪ್ರಚೋದನಕಾರಿ ಹೇಳಿಕೆ ನೀಡಿದರೆ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಮಾಡಿ, ಕಾನೂನನ್ನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಶತಸಿದ್ಧ. ಅದು ಕೋಡಿಹಳ್ಳಿ ಚಂದ್ರಶೇಖರ್ ಆಗಿರಬಹುದು. ಬೇರೆಯವರೇ ಆಗಿರಬಹುದು ಎಂದರು.
ಸಾರಿಗೆ ನೌಕರರಿಗೆ ಮುಷ್ಕರ ಕೈಬಿಡುವಂತೆ ಮನವಿ ಮಾಡುತ್ತೇವೆ. ಅವರು ಒಪ್ಪಿಗೆ ನೀಡದಿದ್ದರೆ ಎಸ್ಮಾ, ರಾಷ್ಟ್ರೀಯ ವಿಪತ್ತುಕಾಯ್ದೆ ಅದಕ್ಕಿಂತ ಮಿಗಿಲಾದ ಕಾನೂನನ್ನು ಜಾರಿ ಮಾಡುವ ಚಿಂತನೆಯೂ ಇದೆ. ಈ ಮುಷ್ಕರವನ್ನು ಅತ್ಯಂತ ಕಠಿಣವಾಗಿ ನಿಭಾಯಿಸುತ್ತೇವೆ. ಸಂಧಾನ ಪ್ರಶ್ನೆಯೇ ಇಲ್ಲ ಎಂದರು.
ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ಎಲ್ಲವನ್ನೂ ಕೂಲಂಕುಶವಾಗಿ ಚರ್ಚಿಸಿಯೇ ತೀರ್ಮಾನ ಮಾಡಿದ್ದೇವೆ ಎಂದ ಅವರು, ರಜೆ ಹಬ್ಬ ಇರೋದ್ದರಿಂದ ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸುವ ಬಗ್ಗೆ ರೈಲ್ವೆ ಅಧಿಕಾರಿಗಳ ಜತೆ ಮಾತನಾಡುವುದಾಗಿಯು ಅವರು ಹೇಳಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಈ ಸಭೆಯಲ್ಲಿ ಮುಖ್ಯಕಾರ್ಯದರ್ಶಿ ರವಿಕುಮಾರ್, ಸಾರಿಗೆ ಇಲಾಖೆಯ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೆಶ್ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಬಿಎಂಟಿಸಿ ಎಂಡಿ ಶೀಖಾ, ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್, ಸಾರಿಗೆ ಆಯುಕ್ತ ಶಿವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಾರಿಗೆ ನೌಕರರ ವಿರುದ್ಧ ಎಸ್ಮಾ ಬಳಸಲು ಚಿಂತನೆ.

ಶೇ. ೮ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಸಮ್ಮತಿ.

೬ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಇಲ್ಲ.

ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ.

ಪ್ರಚೋದನಕಾರಿ ಹೇಳಿಕೆ ನೀಡಿದರೂ ಕಾನೂನು ಕ್ರಮ.