ಸಾರಿಗೆ ನೌಕರರ ವಿನೂತನ ಪ್ರತಿಭಟನೆ

ಬ್ಯಾಡಗಿ,ಏ 3: ಆರನೇ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಬ್ಯಾಡಗಿ ಘಟಕದ ಚಾಲಕರು ಮತ್ತು ನಿರ್ವಾಹಕರು ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಶುಕ್ರವಾರ ಮಿರ್ಚಿ, ಬಜ್ಜಿ, ಬೋಂಡಾ ಟೀ, ಕಾಫಿ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ನೌಕರರ ಕೂಟದ ತಾಲೂಕಾಧ್ಯಕ್ಷ ಚಂದ್ರು ದಾನಮ್ಮನವರ ಅವರು, ಕೋವಿಡ್ ಸೊಂಕಿನಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆಯಡಿ ಪರಿಹಾರ ನೀಡುವುದು, ಅಂತರ ನಿಗಮಗಳ ವರ್ಗಾವಣೆ ಕುರಿತು ಸೂಕ್ತ ಮಾರ್ಗಸೂಚಿ ನೀತಿಯ ರಚನೆ, ಎನ್‍ಐಎನ್‍ಸಿ ಪದ್ದತಿ ಬದಲಾವಣೆ, ಆರನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕಳೆದ ಡಿಸೆಂಬರ ತಿಂಗಳಲ್ಲಿ ಮುಷ್ಕರ ಮಾಡಿದ ಸಂದರ್ಭದಲ್ಲಿ ಸರ್ಕಾರ ಆರ್ಥಿಕ ಅಂಶಗಳನ್ನು ಪರಿಗಣಿಸಿ ಈಡೇರಿಸುವ ಭರವಸೆ ನೀಡಿತ್ತು ಆದರೆ ಈವರೆಗೂ ಯಾವುದೇ ಭರವಸೆಯ ಈಡೇರಿಕೆಗೆ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.
ತಾಲೂಕಾ ಸಾರಿಗೆ ನೌಕರರ ಕೂಟದ ಉಪಾಧ್ಯಕ್ಷ ಚೇತನಕುಮಾರ ನಾಯಕ ಮಾತನಾಡಿ, ಸಾರಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ಉಗ್ರ ಪ್ರತಿಭಟನೆಗಳನ್ನು ಕೈಗೊಳ್ಳುವುದಾಗಿ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ತಾಲೂಕಾ ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಎಂ.ಮುಲ್ಲಾನವರ, ಬಿ.ವಿ.ಪೂಜಾರ, ತಾರಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.