ಸಾರಿಗೆ ನೌಕರರ ಮೇಲೆ ಲಾಠಿಚಾರ್ಜ್‌ಗೆ ಖಂಡನೆ

ಕೋಲಾರ, ಏ.೨೧: ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಂತಿಯುತವಾಗಿ ಮುಷ್ಕರವನ್ನು ನಡೆಸುತ್ತಿದ್ದ ಸಾರಿಗೆ ನೌಕರರ ಮೇಲೆ ಕೈ-ಕಾಲು ಮುರಿಯುವ ಮಟ್ಟಕ್ಕೆ ಕೋಲಾರದಲ್ಲಿ ಲಾಠಿಚಾರ್ಜ್ ನಡೆಸಿರುವುದು ಖಂಡನೀಯವಾಗಿದ್ದು ಕೂಡಲೆ ಗೃಹಮಂತ್ರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ೬ನೇ ಆಯೊಗದ ವೇತನ ಜಾರಿ, ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆನ್ನುವುದು ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ೧೪ ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ.
ಮಂಗಳವಾರದಂದು ಜೈಲ್ ಭರೋ ಚಳುವಳಿಗೆ ರಾಜ್ಯ ಸಂಘದಿಂದ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಸಂಘದಿಂದ ನಗರ ಹೊರವಲಯದ ಸಂಗೊಂಡಹಳ್ಳಿ ಸಮೀಪ ನೌಕರರು ನೆರೆದಿದ್ದರು. ಆದರೆ ಪೊಲೀಸರು ನೌಕರರ ಗುಂಪಿನ ಮೇಲೆ ಲಾಠಿ ಪ್ರಹಾರ ನಡೆಸಿ ಕೈಕಾಲು ಮುರಿಯುವಂತೆ ಹಲ್ಲೆ ಮಾಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿ, ಘಟನೆಯ ಮೂಲಕ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಸರ್ಕಾರ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಮಾತುಕತೆ ಕರೆದು ಈಡೇರಿಸಬೇಕಿತ್ತು ಇದರಲ್ಲಿ ಪ್ರತಿಷ್ಟೆಯಾಗಿ ತೆಗೆದು ಕೊಂಡು ಸಾರಿಗೆ ನೌಕರರಿಗೂ ಮತ್ತು ಜನಸಾಮಾನ್ಯರಿಗೆ ತೊಂದರೆ ನೀಡುತ್ತಿರುವುದು ಖಂಡನೀಯ.
ರಾಜ್ಯದಲ್ಲಿ ಸರ್ಕಾರವು ಎಲ್ಲ ವರ್ಗದ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿ, ಕೋಮಾ ಸ್ಥಿತಿಗೆ ತಲುಪಿದೆ. ಇಂತಹ ಸಂದರ್ಭದಲ್ಲಿ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಹೋರಾಟ ನಡೆಸುವುದು ತಪ್ಪೇ ? ಕೂಡಲೇ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಂಡು ಸಾರಿಗೆ ನೌಕರರಿಗೆ ನ್ಯಾಯ ದೊರೆಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.