ಸಾರಿಗೆ ನೌಕರರ ಮುಷ್ಕರ 9ನೇ ದಿನಕ್ಕೆ: ಶಾಸಕರಿಗೆ ಹೋರಾಟಗಾರರ ಭೇಟಿ, ಈಶಾನ್ಯ ಸಾರಿಗೆ ಸಂಸ್ಥೆಗೆ 40.50 ಕೋಟಿ ರೂ.ಗಳಷ್ಟು ನಷ್ಟ

ಕಲಬುರಗಿ,ಏ.15:ಆರನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ರಾಜ್ಯವ್ಯಾಪಿ ಸಾರಿಗೆ ನೌಕರರು ಆರಂಭಿಸಿರುವ ಪ್ರತಿಭಟನೆ ಗುರುವಾರ 9ನೇ ದಿನದಲ್ಲಿ ಮುಂದುವರೆದಿದೆ. ಖಾಸಗಿ ವಾಹನಗಳ ದರ್ಬಾರವೇ ಮುಂದುವರೆದಿದೆ. ಇದರಿಂದ ಪ್ರಯಾಣಿಕರ ಪರದಾಟ ತಪ್ಪದಂತಾಗಿದೆ.
ಈ ಮಧ್ಯೆ, ಶ್ರಮಜೀವಿಗಳ ವೇದಿಕೆಯ ರಾಜ್ಯಾಧ್ಯಕ್ಷ ಚಂದ್ರಶೇಖರ್ ಎಸ್. ಹಿರೇಮಠ್ ಅವರ ನೇತೃತ್ವದಲ್ಲಿನ ಮುಷ್ಕರ ನಿರತ ಸಿಬ್ಬಂದಿಗಳು ಗುರುವಾರ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಅವರನ್ನು ಭೇಟಿ ಮಾಡಿ, ಆರನೇ ವೇತನ ಆಯೋಗದ ವೇತನ ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿದ ಶಾಸಕರು ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ತರುವುದಾಗಿ ತಿಳಿಸಿದರು. ಅದೇ ರೀತಿ ಕಳೆದ ಬುಧವಾರದಂದು ಅಫಜಲಪುರ ಕ್ಷೇತ್ರದ ಶಾಸಕ ಎಂ.ವೈ. ಪಾಟೀಲ್ ಅವರ ನಗರದಲ್ಲಿನ ಶಾಂತಿನಗರದ ನಿವಾಸಕ್ಕೆ ಹೋರಾಟಗಾರರು ಭೇಟಿ ನೀಡಿ, ಬೇಡಿಕೆಗಳ ಇತ್ಯರ್ಥಕ್ಕೆ ಆಗ್ರಹಿಸಿದರು.
ಬೇಡಿಕೆಗಳಿಗೆ ಬೆಂಬಲಿಸಿದ ಶಾಸಕ ಎಂ.ವೈ. ಪಾಟೀಲ್ ಅವರು ಹೋರಾಟಕ್ಕೆ ಬೆಂಬಲಿಸಿದರಲ್ಲೇ ಆರನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
40.50 ಕೋಟಿ ನಷ್ಟ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮುಷ್ಕರದ ಹಿನ್ನೆಲೆಯಲ್ಲಿ 40.50 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮರಾವ್ ಅವರು ತಿಳಿಸಿದ್ದಾರೆ.
ಮುಷ್ಕರ ನಿರತರ ಮನವೊಲಿಸುವ ಕಾರ್ಯವು ಮುಂದುವರೆದಿದೆ. ಆದಾಗ್ಯೂ, ಮುಷ್ಕರ ಸಮಯದ ಸಂದಿಗ್ದ ಸಮಯದಲ್ಲಿ ಸಹ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸಲು ಬದ್ಧತೆ ತೋರಿದ ಸಂಸ್ಥೆಯ ಸಿಬ್ಬಂದಿಗಳಿಗೆ ಎರಡನೇ ಹಂತದಲ್ಲಿ ಮಾರ್ಚ್ ತಿಂಗಳ ವೇತನವನ್ನು ಗುರುವಾರಂದು 1927 ಸಿಬ್ಬಂದಿಗಳಿಗೆ 340.73 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ. ಅವರಲ್ಲಿ 60 ಜನ ಆಡಳಿತ ಸಿಬ್ಬಂದಿಗೆ 13.71 ಲಕ್ಷ ರೂ.ಗಳನ್ನು 965 ಚಾಲನಾ ಸಿಬ್ಬಂದಿಗಳಿಗೆ 164.84 ಲಕ್ಷ ರೂ.ಗಳಖು, 892 ತಾಂತ್ರಿಕ ಸಿಬ್ಬಂದಿಗಳಿಗೆ 162.18 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಲಿಂಗಸುಗೂರು ಘಟಕದ ವ್ಯಾಪ್ತಿಯಲ್ಲಿ ಬರುವ ಹಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸ್ ಚಾಲಕ, ನಿರ್ವಾಹಕರಿಗೆ ಮನಬಂದಂತೆ ಬೈದು, ಹೂವಿನ ಹಾರ ಹಾಕಿ, ಅವಮಾನ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಐವರು ಸಂಸ್ಥೆಯ ಸಿಬ್ಬಂದಿಗಳ ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಿಟ್ಟಿಮಲ್ಕಾಪುರ ಕ್ರಾಸ್ ಹತ್ತಿರ ರಾಯಚೂರು- ಕರ್ನೂಲ್ ಕಡೆ ಬಸ್ ನಡೆಸಿಕೊಮಡು ಹೋರಟ ಕರ್ತವ್ಯನಿರತ ಚಾಲಕ, ನಿರ್ವಾಹಕರಿಗೆ ಗಂಪು ಸೇರಿಕೊಂಡು ದುರುದ್ದೇಶದಿಂದ ಮಾರ್ಗ ಮಧ್ಯದಲ್ಲಿ ಅಡ್ಡಗಟ್ಟಿ ಅವರನ್ನು ಕೆಳಗಿಳಿಸಿ, ಕುಂಕುಮ ಎರಚಿ ಅಸಭ್ಯವಾಗಿ ವರ್ತಿಸಿರುವುದರಿಂದ ಅಪರಿಚಿತ ಆರು ಜನರ ವಿರುದ್ಧ ಪೋಲಿಸ್ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಷ್ಕರ ನಿರತ ಚಾಲನಾ ಸಿಬ್ಬಂದಿಗಳ ಮನವೊಲಿಸುವ ಕಾರ್ಯವು ಮುಂದುವರೆದಿದ್ದು, ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾಋಎ. 7ರಂದು 101, 8ರಂದು 144, 9ರಂದು 221, 10ರಂದು 339, 11ರಂದು 510, 12ರಂದು 567, 13ರಂದು 534, 14ರಂದು 597, 15ರಂದು 657 ಬಸ್‍ಗಳು ಸೇರಿ ಒಟ್ಟು 3670 ಬಸ್‍ಗಳು ಕಾರ್ಯಾಚರಣೆಗೊಂಡಿವೆ ಎಂದು ಅವರು ಹೇಳಿದ್ದಾರೆ.
ಕಾರ್ಮಿಕ ಒಕ್ಕೂಟದ ಮುಷ್ಕರದ ಹಿನ್ನೆಲೆಯಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ಬಸ್ ನಿಲ್ದಾಣಗಳ ಮೂಲಕ ಖಾಸಗಿ ವಾಹನಗಳ ಕಾರ್ಯಾಚರಣೆ ಮಾಡಲಾಗಿದೆ. 331 ಖಾಸಗಿ ಬಸ್‍ಗಳು, 226 ಇತರೆ ಅಂತರಾಜ್ಯ ಬಸ್‍ಗಳು, 3043 ಇತರೆ ವಾಹನಗಳು ಸೇರಿ ಒಟ್ಟು 3660 ವಾಹನಗಳು ಕಾರ್ಯಾಚರಣೆಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾ ಕಾರ್ಯಕ್ಕೆ ಬಸ್‍ಗಳು: ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಹ ಮಸ್ಕಿ, ಬಸವಕಕಲ್ಯಾಣ ವಿಧಾನಸಬಾ ಕ್ಷೇತ್ರಗಳು, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಒಟ್ಟು 310 ಬಸ್‍ಗಳನ್ನು ಒದಗಿಸಲಾಗಿದೆ. ಬೆಳಗಾವಿ ಮತಕ್ಷೇತ್ರಕೆಕ ವಿಜಯಪುರ ವಿಭಾಗದ 240, ಮಸ್ಕಿ ಕ್ಷೇತ್ರಕ್ಕೆ ರಾಯಚೂರು ವಿಭಾಗದ 25, ಬಸವಕಲ್ಯಾಣ ಕ್ಷೇತ್ರಕ್ಕೆ ಬೀದರ್ ವಿಭಾಗದ 45 ಬಸ್‍ಗಳನ್ನು ಒದಗಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.
ಮುಷ್ಕರ ನಿರತ ಚಾಲನಾ ಸಿಬ್ಬಂದಿಗಳಿಗೆ ಇಲ್ಲಿಯವರೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ವಿನಂತಿಸಿಕೊಳ್ಳಲಾಗಿದೆ. ಕೆಲವು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕೆಲವು ಸಿಬ್ಬಂದಿಗಳಿಗೆ ಸಂಸ್ಥೆಯಿಂದ ವಜಾಗೊಳಿಸಲಾಗಿದೆ. ಆದಾಗ್ಯೂ, ಸಹ ಕರ್ತವ್ಯಕ್ಕೆ ಹಾಜರಾಗದೇ ಇರುವುದು ನಮ್ಮ ಪ್ರಯತ್ನಗಳಿಗೆ ಸ್ಪಂದಿಸುತ್ತಿಲ್ಲ ಎಂದು ತಿಳಿಯುತ್ತಿದೆ. ಆದಾಗ್ಯೂ ಸಹ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಉಂಟಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.