ಸಾರಿಗೆ ನೌಕರರ ಮುಷ್ಕರ 2ನೇ ದಿನಕ್ಕೆ: ಬಜ್ಜಿ, ಬೊಂಡಾ ವಿತರಿಸಿ ಪ್ರತಿಭಟನೆ

ಕಲಬುರಗಿ: ಏ.2: ಆರನೇ ವೇತನ ಆಯೋಗದ ಜಾರಿಯನ್ನು ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯವ್ಯಾಪಿ ಕರೆಯ ಮೇರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಆರಂಭಿಸಿದ್ದ ಮುಷ್ಕರವು ಶುಕ್ರವಾರ ಎರಡನೇ ದಿನದಲ್ಲಿ ಮುಂದುವರೆದಿದ್ದು, ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶ್ರಮಜೀವಿಗಳ ವೇದಿಕೆಯ ರಾಜ್ಯಾಧ್ಯಕ್ಷ ಚಂದ್ರಶೇಖರ್ ಎಸ್. ಹಿರೇಮಠ್ ಅವರ ನೇತೃತ್ವದಲ್ಲಿ ಬಜ್ಜಿ, ಬೋಂಡಾ ವಿತರಿಸಿ ಪ್ರತಿಭಟಿಸಿದರು.
ಗುರುವಾರದಂದು ಸಾಂಕೇತಿಕವಾಗಿ ಕಪ್ಪು ಪಟ್ಟಿ ಧರಿಸಿದ್ದ ನೌಕರರು, ಶುಕ್ರವಾರ ನಗರದ ಕೇಂದ್ರ ಬಸ್ನಿಲ್ದಾಣದಲ್ಲಿ ಬಜ್ಜಿ, ಚೂಡಾ, ಚಹಾ ಮಾಡುವ ಮುಖಾಂತರ ಸರ್ಕಾರಕ್ಕೆ ನೀವು ನೀಡುವ ವೇತನದಿಂದ ನಮ್ಮ ಬದುಕು ನಡೆಸಲು ಸಾಲುವುದಿಲ್ಲ ಎಂಬ ಸಂದೇಶವನ್ನು ಸಾರಿದರು. ನೌಕರರು ನೂರಾರು ಸಂಖ್ಯೆಯಲ್ಲಿ ಸೇರಿ ಬಡವರಿಗೆ, ಗ್ರಾಮಾಂತರ ಪ್ರದೇಶದ ಜನರಿಗೆ ಬಜ್ಜಿ, ಚುಡಾ, ಚಹಾ ಕೊಡುವ ಮೂಲಕ ವಿನೂತನ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಎಸ್. ಹಿರೇಮಠ್ ಅವರು ಮಾತನಾಡಿ, ರಾಜ್ಯ ಸರ್ಕಾರವು ಈಗಲಾದರೂ ಕಾಳಜಿವಹಿಸಿ ಆರನೇ ವೇತನವನ್ನು ಸಾರಿಗೆ ನೌಕರರಿಗೆ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ನೌಕರರ ಪದಾಧಿಕಾರಿಗಳಾದ ಜೈರಾಮ್ ರಾಥೋಡ್, ಮಲ್ಲಿಕಾರ್ಜುನ್, ಅಶೋಕ್, ಶಿವಕುಮಾರ್ ರುದ್ರಗೋಡ್, ಉದಯಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.