ಸಾರಿಗೆ ನೌಕರರ ಮುಷ್ಕರ ಸರ್ಕಾರವೇ ಹೊಣೆ

ಬೆಂಗಳೂರು, ಏ. ೮- ಕೊರೊನಾ ರೋಗದಿಂದ ತತ್ತರಿಸಿ ಹೋಗಿರುವ ರಾಜ್ಯದ ಜನತೆ ಸಾರಿಗೆ ನೌಕರರ ಮುಷ್ಕರದಿಂದಾಗಿ ದುಪ್ಪಟ್ಟು ಕಷ್ಟನಷ್ಟಕ್ಕೀಡಾಗುತ್ತಿರುವುದಕ್ಕೆ ರಾಜ್ಯದ ಅಸಮರ್ಥ ಭ್ರಷ್ಟ ಬಿಜೆಪಿ ಸರ್ಕಾರವೇ ಹೊಣೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ದೂರಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕಳೆದ ಬಾರಿ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಸಂದರ್ಭದಲ್ಲಿ ಅವರ ಬೇಡಿಕೆಗಳ ಬಗ್ಗೆ ಸಮ್ಮತಿಸಿದಾಗಲೇ ಅದರ ಪರಿಣಾಮವನ್ನು ರಾಜ್ಯ ಸರ್ಕಾರ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಆ ಕ್ಷಣದಲ್ಲಿ ಸುಳ್ಳು ಆಶ್ವಾಸನೆ ನೀಡಿ ನಂತರ ಮಾತು ತಪ್ಪಿರುವುದೇ ಈಗಿನ ಸಂಘರ್ಷಕ್ಕೆ ಕಾರಣ ಎಂದು ಟ್ವೀಟರ್‌ನಲ್ಲಿ ಹೇಳಿದ್ದಾರೆ.
ಕಾರ್ಮಿಕ ಸಂಘದ ನಾಯಕರ ಜತೆ ಕುಳಿತು ಅವರ ಮನವೊಲಿಸಿ ಸಮಸ್ಯೆಯನ್ನು ಬಗೆಹರಿಸಬೇಕಾದ ರಾಜ್ಯ ಸರ್ಕಾರ ಖಾಸಗಿ ಬಸ್ ಓಡಿಸುವ ಎಸ್ಮಾ ಜಾರಿಗೊಳಿಸುವ ಹೆದರಿಕೆಯೊಡ್ಡಿ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿರುವುದು ದುರದಾದೃಷ್ಟಕರ ಎಂದು ಅವರು ಟ್ವಟ್ ಮಾಡಿದ್ದಾರೆ.
ಕೆಎಸ್‌ಆರ್‌ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಲಾಗದಿರುವುದಕ್ಕೆ ರಾಜ್ಯ ಸರ್ಕಾರ ನೀಡುತ್ತಿರುವ ಆರ್ಥಿಕ ಸಂಕಷ್ಟ, ಸ್ವಯಂಕೃತ ಅಪರಾಧ. ತನ್ನ ದುರಾಡಳಿತ ಮತ್ತು ಕೇಂದ್ರದ ಗುಲಾಮಗಿರಿಯಿಂದಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಅವರು ದೂರಿದ್ದಾರೆ.
ರಾಜ್ಯ ಸರ್ಕಾರ ತನ್ನ ಪ್ರತಿಷ್ಠೆಯನ್ನು ಬದಿಗಿಟ್ಟು ತಕ್ಷಣವೇ ಕಾರ್ಮಿಕರ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದತೆಯಿಂದ ಬಗೆಹರಿಸಿ ಸಾರಿಗೆ ವ್ಯವಸ್ಥೆ ಇಲ್ಲದೆ ಕಷ್ಟನಷ್ಟಕ್ಕೀಡಾಗಿರುವ ಜನತೆಯನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆಂತರಿಕ ಕಿತ್ತಾಟ, ಅಸಾಮರ್ಥ್ಯ ಮತ್ತು ಭ್ರಷ್ಟಾಚಾರಗಳಿಂದ ಹಾದಿ ತಪ್ಪಿರುವ ರಾಜ್ಯದ ಬಿಜೆಪಿ ಸರ್ಕಾರದ ಪಾಪದ ಫಲವನ್ನು ಜನತೆ ಅನುಭವಿಸಬೇಕಾಗಿದೆ. ಉಪಚುನಾವಣೆಯಲ್ಲಿ ಜನರು ಬಿಜೆಪಿಗೆ ಪಾಠ ಕಲಿಸುವರು ಎಂದು ಅವರು ಟ್ವೀಟ್ ಮಾಡಿದ್ದಾರೆ.