ಸಾರಿಗೆ ನೌಕರರ ಮುಷ್ಕರ ಸಂಜೆ ವೇಳೆಗೆ ಅಂತ್ಯ

ಬೆಂಗಳೂರು,ಏ.೨೧- ಕೋವಿಡ್ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟ ಬೆನ್ನಲ್ಲೇ ಮುಷ್ಕರ ಸಂಜೆ ಇಲ್ಲವೇ ನಾಳೆ ವೇಳೆಗೆ ಅಂತ್ಯವಾಗಲಿದೆ.
ನ್ಯಾಯಾಲಯದ ಆದೇಶವನ್ನು ಗೌರವಿಸಿರುವ ಮುಷ್ಕರ ನಿರತ ನೌಕರರು ಮಧ್ಯಾಹ್ನ ಸಭೆ ಸೇರಿ ಚರ್ಚೆ ನಡೆಸಿ ಮುಷ್ಕರ ಅಂತ್ಯಗೊಳಿಸುವ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ನ್ಯಾಯಾಲಯದ ಪೂರ್ಣ ಪ್ರಮಾಣದ ಆದೇಶವನ್ನ ನೋಡಿ ಮುಖಂಡರ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ ಅದರ ಜೊತೆಗೆ ಮುಷ್ಕರ ನೌಕರರ ಹಿತ ಕೂಡ ಮುಖ್ಯವಾಗಿದೆ ಅಮಾನತು,ವಜಾ,ವರ್ಗಾವಣೆ ಇನ್ನಿತರ ನೌಕರರ ವಿರೋಧಿ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದು ಅದರ ಬಗ್ಗೆಯೂ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದರು.
ನ್ಯಾಯಾಲಯದ ಆದೇಶದ ಪ್ರತಿಯನ್ನಿಟ್ಟುಕೊಂಡು ವಕೀಲರು ಹಾಗೂ ಮುಖಂಡರ ಜೊತೆಗೆ ಚರ್ಚೆ ನಡೆಸಿ ಮುಷ್ಕರ ಹಿಂತೆಗೆದುಕೊಳ್ಳುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂಜೆ ವೇಳೆಗೆ ಮುಷ್ಕರ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ
ಈ ಮಧ್ಯೆ ಕೋವಿಡ್ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟ ಬೆನ್ನಲ್ಲೇ
ಬಸ್ ಗಳ ಸಂಚಾರ ಹೆಚ್ಚಾಗಿದ್ದು ನೌಕರರ ಹಾಜರಾತಿಯಲ್ಲೂ ಹೆಚ್ಚಳ ಕಂಡುಬಂದಿದೆ.
೭೫೪೧ಬಸ್ ಗಳ ಸಂಚಾರ:
ರಾಜ್ಯಾದ್ಯಂತ ನಾಲ್ಕು ನಿಗಮಗಳ ೭೫೪೧ಬಸ್ ಗಳು ಸಂಚರಿಸಿದ್ದು ಪ್ರಯಾಣಿಕರು ಬಸ್ ಗಾಗಿ ಪರದಾಟ ನಡೆಸುವುದು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.
ಬೆಂಗಳೂರು, ಮೈಸೂರು,ತುಮಕೂರು, ಹಾಸನ,ಮಂಡ್ಯ, ಚಾಮರಾಜನಗರ ವಿಜಯಪುರ, ಬೀದರ್, ಯಾದಗಿರಿ, ರಾಯಚೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಸ್ ಸಂಚಾರ ಹೆಚ್ಚಳಗೊಂಡಿದೆ.
ಆಂಧ್ರಪ್ರದೇಶ, ತೆಲಂಗಾಣದ ಹೈದರಾಬಾದ್,ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಿಗೆ ತೆರಳುವ ಬಸ್ ಸಂಚಾರದಲ್ಲೂ ಹೆಚ್ಚಳ ಕಂಡುಬಂದಿದೆ.
ಕಳೆದ ೧೪ ದಿನಗಳಿಂದ ಬಹುತೇಕ ಸ್ಥಗಿತಗೊಂಡಿದ್ದ ನಗರ ಸಾರಿಗೆ ಪುನರಾರಂಭಗೊಂಡಿದೆ. ಮಧ್ಯಾಹ್ನದ ವೇಳೆಗೆ ಇನ್ನಷ್ಟು ಬಸ್ ಗಳ ಸಂಚಾರ ಆರಂಭಗೊಳ್ಳಲಿದೆ ಎಂಬ ಭರವಸೆಯನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.