ಸಾರಿಗೆ ನೌಕರರ ಮುಷ್ಕರ : ಸಂಚಾರ ಸಂಪೂರ್ಣ ಸ್ಥಗಿತ – ನಿಲ್ದಾಣ ಬಣ ಬಣ

ಬಿರು ಬೇಸಿಗೆಯಲ್ಲಿ ಪ್ರಯಾಣಿಕರ ಪರದಾಟ : ತುರ್ತು ಪ್ರಯಾಣಿಕರ ಪರಿಸ್ಥಿತಿ ಗಂಭೀರ
ರಾಯಚೂರು.ಏ.07- 6 ನೇ ವೇತನ ಅನುಷ್ಠಾನಕ್ಕೆ ಆಗ್ರಹಿಸಿ, ಇಂದಿನಿಂದ ಅನಿರ್ದಿಷ್ಟ ಸಾರಿಗೆ ಇಲಾಖೆ ಸಿಬ್ಬಂದಿಯ ಮುಷ್ಕರ ಪ್ರಯಾಣಿಕರ ಮೇಲೆ ಭಾರೀ ಪರಿಣಾಮ ಬೀರಿ, ಜನ ಬಿರು ಬಿಸಿಲಲ್ಲಿ ಬಸ್‌ಗಳಿಗಾಗಿ ಪರದಾಡುವ ಪರಿಸ್ಥಿತಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕಂಡು ಬಂದಿತು.
ಏ.7 ರಿಂದ ಅನಿರ್ದಿಷ್ಟ ಸಾರಿಗೆ ಸ್ಥಗಿತ ಮುಷ್ಕರ ಘೋಷಣೆ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಕ್ಕೆ ಹೆಚ್ಚಿನ ಪ್ರಯಾಣಿಕರು ಬಾರದಿರುವುದು ಪರಿಸ್ಥಿತಿ ಅನುಕೂಲಕರವಾಗಿತ್ತು. ಆದರೆ, ಇನ್ನೂ ಕೆಲವರು ಬೆಳಗಿನ ಜಾವ ಬಸ್ ಬಿಡಬಹುದೆಂಬ ನಿರೀಕ್ಷೆಯಲ್ಲಿ ನಿಲ್ದಾಣಕ್ಕೆ ಬಂದು ಬಸ್‌ಗಾಗಿ ಕಾದು ಕುಳಿತಿದ್ದರು. ಕೆಲ ಅನಿವಾರ್ಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಇನ್ನೂ ಕೆಲ ಪ್ರಯಾಣಿಕರು ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ಕುಳುತಿದ್ದರು. ಆದರೆ, ಪೂರ್ವ ಘೋಷಿತ ಮುಷ್ಕರ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬಸ್ ನಿಲ್ದಾಣದಿಂದ ಯಾವುದೇ ಬಸ್ ಸಂಚರಿಸಲಿಲ್ಲ. ಹೊರಗ‌ಡೆಯಿಂದಲೂ ಯಾವುದೇ ಬಸ್ ನಿಲ್ದಾಣಕ್ಕೆ ಬರಲಿಲ್ಲ.
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಎಲ್ಲಾ ಬಸ್‌ಗಳನ್ನು ಡಿಪೋದಲ್ಲೇ ನಿಲ್ಲಿಸಲಾಗಿತ್ತು. ಸದಾ ಬಸ್‌ಗಳಿಂದ ಗಿಜುಗುಡುತ್ತಿದ್ದ ಬಸ್ ನಿಲ್ದಾಣ ಇಂದು ಬಸ್ ಇಲ್ಲದೇ, ಬಣ ಬಣ ಎನ್ನುತ್ತಿತ್ತು. ಅನಿವಾರ್ಯ ಪ್ರಯಾಣದ ಪ್ರಯಾಣಿಕರು ಖಾಸಗಿ ಟೆಂಪೋಗಳನ್ನು ಅವಲಂಬಿಸಿ, ಹತ್ತಿರದ ಊರುಗಳಿಗೆ ಸೇರಿಕೊಳ್ಳುವ ಪರ್ಯಾಯ ವ್ಯವಸ್ಥೆ ಇತ್ತಾದರೂ, ದೂರದ ಊರಿನ ಪ್ರಯಾಣಿಕರಿಗಂತೂ ಯಾವುದೇ ಬಸ್ ವ್ಯವಸ್ಥೆ ಇಲ್ಲದಿರುವುದು ಗಂಭೀರಗೊಳ್ಳುವಂತಾಯಿತು. ನಿನ್ನೆ ನಗರಕ್ಕೆ ಆಗಮಿಸಿದ ಜನ ಇಂದು ತಮ್ಮ ಊರಿಗೆ ಮರಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಾರಿಗೆ ಇಲಾಖೆಯ ಚಾಲಕರು ಮತ್ತು ನಿರ್ವಹಕರು ಮತ್ತಿತರ ಸಿಬ್ಬಂದಿ ವರ್ಗ ಬಸ್ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದರು. ಖಾಸಗಿ ಬಸ್ ಮೂಲಕ ಪ್ರಯಾಣಿಕರಿಗೆ ಸಂಚಾರದ ಪರ್ಯಾಯ ವ್ಯವಸ್ಥೆಯ ಸೂಚನೆಗಳ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಸಿಬ್ಬಂದಿ ಕಾವಲು ಕಾಯುತ್ತಾ, ಖಾಸಗಿ ಬಸ್ ಓಡಾಟಕ್ಕೆ ಅವಕಾಶ ನೀಡದಿರಲು ನಿರ್ಧರಿಸಿದ್ದರು. ಏತನ್ಮಧ್ಯೆ ಸಹಾಯಕ ಆಯುಕ್ತರಾದ ಸಂತೋಷ ಕಾಮಗೌಡ ಅವರು ಆರ್‌ಟಿಓ ವೃತ್ತದ ಬಳಿ ಬಸ್ ಡಿಪೋ 2 ಮತ್ತು 3 ಹಾಗೂ ಬಸ್ ನಿಲ್ದಾಣ ಹತ್ತಿರ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಜಾರಿಗೊಳಿಸುವ ಉದ್ದೇಶದಿಂದ ಏ.7 ರ ಮಧ್ಯರಾತ್ರಿ 12 ಗಂಟೆಯಿಂದ 8-4-2021 ರ ಮಧ್ಯರಾತ್ರಿ 12 ಗಂಟೆವರೆಗೆ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಈ ನಿಷೇಧಾಜ್ಞೆದನ್ವಯ 100 ಮೀ.ಸುತ್ತಲಲ್ಲಿ ಗುಂಪು ಗುಂಪಾಗಿ ಜನ ಸೇರುವುದನ್ನು ನಿಷೇಧಿಸಲಾಗಿದೆ. ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು. ಬಸ್ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಖಾಸಗಿ ವಾಹನಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದು. ಬಸ್ ನಿಲ್ದಾಣ ಧರಣಿ ಹಾಗೂ ಘೋಷಣೆ ಕೂಗೂವುದು ನಿಷೇಧಿಸಲಾಗಿದೆ. ಶವಾಕೃತಿ ಹಾಗೂ ಪ್ರತಿಮೆ ಪ್ರದರ್ಶನ ಮಾಡುವುದನ್ನು ಪ್ರತಿಬಂಧಿಸಿ, ಆದೇಶಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಬಸ್ ಮುಷ್ಕರದ ಪ್ರಥಮ ದಿನ ಜನ ತತ್ತರಿಸಿದ್ದಾರೆ. ಈ ಮುಷ್ಕರ ಮುಂದುವರೆದರೇ, ಪ್ರಯಾಣಿಕರಂತೂ ಗಂಭೀರ ಪರಿಸ್ಥಿತಿ ಎದುರಿಸುವಂತಹ ಪ್ರಸಂಗ ನಿರ್ಮಾಣವಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಬಸ್ ಮುಷ್ಕರ ಸ್ಥಗಿತಗೊಳ್ಳುವವರೆಗೂ ಪ್ರಯಾಣಿಸಲು ಯಾರು ಬಸ್ ನಿಲ್ಕಾಣಕ್ಕೆ ಬಾರದಂತೆ ಕೋರಲಾಗುತ್ತಿದೆ.