ಸಾರಿಗೆ ನೌಕರರ ಮುಷ್ಕರ ವಾಪಸ್

ಬೆಂಗಳೂರು,ಮಾ.೧೯:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ವಾಪಸ್ ಬಗ್ಗೆ ನೌಕರರು ಈ ತಿಂಗಳ ೨೧ ರಿಂದ ನಡೆಸಬೇಕಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.
ಸಾರಿಗೆ ನೌಕರರ ೮ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ಅಧ್ಯಕ್ಷ ಹೆಚ್.ವಿ. ಅನಂತಸುಬ್ಬರಾವ್ ಅವರು ಜ. ೨೦ರಿಂದ ನಡೆಯಬೇಕಿದ್ದ ಮುಷ್ಕರವನ್ನು ವಾಪಸ್ ಪಡೆದಿರುವುದಾಗಿ ಹೇಳಿದ್ದಾರೆ.
ಸಾರಿಗೆ ಸಂಸ್ಥೆಯ ನೌಕರರ ಸಂಘಟನೆಯ ಜಂಟಿ ಕ್ರಿಯಾಸಮಿತಿಯ ಅಧ್ಯಕ್ಷರಾಗಿರುವ ಹೆಚ್.ವಿ ಅನಂತಸುಬ್ಬರಾವ್ ಸೇರಿದಂತೆ ಪದಾಧಿಕಾರಿಗಳು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಭೇಟಿ ಮಾಡಿ ನೌಕರರ ವೇತನವನ್ನು ಶೇ. ೧೫ಕ್ಕೆ ಏರಿಕೆ ಮಾಡಿರುವುದಕ್ಕೆ ಅಭಿನಂದನೆ ಹೇಳಿ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿಯಾಗಿ ನೀಡಿರುವ ಭರವಸೆಗಳಿಂದು ಮಾ. ೨೧ರ ಮುಷ್ಕರ ವಾಪಸ್ ಪಡೆದಿದ್ದೇವೆ. ಉಳಿದ ಬೇಡಿಕೆಗಳನ್ನು ಬೇಗ ಈಡೇರಿಸಿ ಎಂದು ಅನಂತಸುಬ್ಬರಾವ್ ಹೇಳಿದರು. ಇದಕ್ಕೆ ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸಿದರು.
ಸಾರಿಗೆ ನೌಕರರಿಗೆ ಸರ್ಕಾರ ಶೇ. ೧೫ ವೇತನ ಏರಿಕೆಗೆ ಸಮ್ಮತಿ ವ್ಯಕ್ತಪಡಿಸಿತ್ತು. ಆದರೆ ಹಿಂಬಾಕಿ ಕುರಿತಂತೆ ಸ್ಪಷ್ಟತೆ ಇಲ್ಲದ ಕಾರಣ ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆದಿರಲಿಲ್ಲ.
ನಿನ್ನೆ ರಾತ್ರಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರ ಜತೆ ನಡೆದ ಸಭೆ ಬಳಿಕ ಮುಷ್ಕರ ವಾಪಸ್ ಪಡೆಯುವ ತೀರ್ಮಾನವನ್ನು ನೌಕರರ ಜಂಟಿ ಸಮಿತಿ ಮಾಡಿತ್ತು.
ನೌಕರರ ಬೇಡಿಕೆಯಂತೆ ೨೦೨೦ರ ಜನವರಿಯಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆಗೆ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ವಾಪಸ್ ಪಡೆಯುವ ತೀರ್ಮಾನವನ್ನು ಜಂಟಿ ಕ್ರಿಯಾಸಮಿತಿ ಪ್ರಕಟಿಸಿದೆ.
ಇನ್ನೊಂದು ಬಣದಿಂದ ಮುಷ್ಕರ
ನೌಕರರ ಸಂಘಟನೆಯ ಜಂಟಿ ಕ್ರಿಯಾ ಸಮಿತಿಯ ಮುಷ್ಕರ ವಾಪಸ್ಸನ್ನು ಒಪ್ಪದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್ ಕ್ರಿಯಾಸಮಿತಿಯವರು ತರಾತುರಿಯಲ್ಲಿ ಮುಷ್ಕರ ವಾಪಸ್ ಪಡೆದಿದ್ದಾರೆ. ನಮ್ಮ ಸಂಘಟನೆಯಿಂದ ಮಾ. ೨೪ ರಿಂದ ಮುಷ್ಕರ ನಡೆಯುತ್ತದೆ ಎಂದು ಹೇಳಿದ್ದಾರೆ.