ಸಾರಿಗೆ ನೌಕರರ ಮುಷ್ಕರ ಬಸ್ ಸಂಚಾರ ವ್ಯತ್ಯಯ

ಬೆಂಗಳೂರು, ಏ. ೬- ರಾಜ್ಯ ಸಾರಿಗೆ ಸಂಸ್ಥೆ ನೌಕರರ ೬ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಮಾಡಲು ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ನಾಳೆಯಿಂದ ಅನಿರ್ದಿಷ್ಠಾವಧಿ ಮುಷ್ಕರ ನಡೆಸುವುದು ಬಹುತೇಕ ನಿಶ್ಚಿತವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದು ಸಂಜೆಯಿಂದಲೇ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಓಡಾಟಕ್ಕೆ ಬಸ್‌ಗಳನ್ನು ನೆಚ್ಚಿಕೊಂಡಿರುವ ಸಾರ್ವಜನಿಕರು ತೊಂದರೆಗೆ ಸಿಲುಕಲಿದ್ದಾರೆ.
ಸಾರಿಗೆ ಸಂಸ್ಥೆಯ ನೌಕರರ ೬ನೇ ವೇತನ ಆಯೋಗದ ಬೇಡಿಕೆ ಈಡೇರದಿದ್ದರೆ ನಾಳೆಯಿಂದ ಅನಿರ್ದಿಷ್ಟಾವದಿ ಮುಷ್ಕರ ನಡೆಸುವುದು ನಿಶ್ಚಿತ ಮುಷ್ಕರವನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಂಸ್ಥೆಗಳ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಸಾರಿಗೆ ನೌಕರರಿಗೆ ಶೇ. ೮ ರಷ್ಟು ವತನ ಏರಿಸುವ ಸರ್ಕಾರದ ನಿರ್ಧಾರ ತಮಗೆ ಒಪ್ಪಿಗೆ ಇಲ್ಲ. ೬ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡುವ ತೀರ್ಮಾನವಾಗಬೇಕು ಇಲ್ಲದಿದ್ದರೆ ಅರ್ನಿದಿಷ್ಟಾವದಿ ಮುಷ್ಕರ ನಡೆಸುತ್ತೇವೆ ಎಂದರು.
ಸರ್ಕಾರದ ಎಸ್ಮಾ ಪ್ರಯೋಗಕ್ಕೂ ನಾವು ಜಗ್ಗುವುದಿಲ್ಲ. ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರಬೇಕು ಅಲ್ಲಿಯವರೆಗೂ ಹೋರಾಟ ನಿಲ್ಲದು. ನಮ್ಮ ಪ್ರತಭಟನೆ ಶಾಂತಿಯುತವಾಗಿರುತ್ತದೆ. ಜೈಲಿಗೆ ಹೋಗಲು ಸಿದ್ಧ ಎಂದು ಅವರು ಹೇಳಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದು, ನಾಳೆಯಿಂದ ಸಂಪೂರ್ಣವಾಗಿ ಬಸ್‌ಗಳ ಸಂಚಾರ ಸ್ತಬ್ಧವಾಗುವ ಸಾಧ್ಯತೆಗಳಿವೆ.
ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ನಾಳೆಯಿಂದ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಮುಂದಾಗಿದ್ದು ಇಂದು ಸಂಜೆಯಿಂದಲೇ ಮುಷ್ಕರದ ಬಿಸಿ ತಟ್ಟಲಿದ್ದು, ಸಂಜೆಯ ನಂತರ ಬಹುತೇಕ ಸಾರಿಗೆ ಬಸ್‌ಗಳ ಸಂಚಾರ ಏರುಪೇರಾಗಲಿದೆ. ಹಾಗಾಗಿ ಬಸ್‌ಗಳನ್ನೇ ಅವಲಂಭಿಸಿರುವ ಜನಸಾಮಾನ್ಯರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲ ಸಾಧ್ಯತೆಗಳಿವೆ.
ಸಾರಿಗೆ ನೌಕರರ ಮುಷ್ಕರದಿಂದ ಬೆಂಗಳೂರಿನಲ್ಲಿ ಪ್ರತಿನಿತ್ಯ ಸಂಚರಿಸುವ ಆರು ಸಾವಿರ ಬಸ್‌ಗಳು ಸೇರಿದಂತೆ ರಾಜ್ಯಾದ್ಯಂತ ಪ್ರತಿನಿತ್ಯ ಸಂಚರಿಸುವ ೨೦ ಸಾವಿರ ಬಸ್‌ಗಳ ಓಡಾಟ ಸ್ತಬ್ದವಾಗಲಿದ್ದು, ನಿತ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಓಡಾಡುವ ಒಂದು ಕೋಟಿಗೂ ಹೆಚ್ಚು ಜನ ತೊಂದರೆಗೆ ಸಿಲುಕಲಿದ್ದಾರೆ