ಸಾರಿಗೆ ನೌಕರರ ಮುಷ್ಕರ ಕ್ಯಾರೆ ಎನ್ನದ ಸರ್ಕಾರ

ಬೆಂಗಳೂರು,ಏ.೨೦-ಆರನೇ ವೇತನ ಆಯೋಗದ ಅನ್ವಯ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ೧೩ನೇ ದಿನಕ್ಕೆ ಕಾಲಿಟ್ಟಿದ್ದು ಬಹುತೇಕ ಸಾರಿಗೆ ನೌಕರರು ಕರ್ತವ್ಯದತ್ತ ಮುಖ ಮಾಡದೇ ಪ್ರತಿಭಟನೆಯನ್ನು ತೀವ್ರ ಗೊಳಿಸಿದ್ದಾರೆ.
ಮುಷ್ಕರ ನಿರತ ಸಾರಿಗೆ ನೌಕರರ ಜೊತೆಗೆ ಮಾತುಕತೆಗೆ ಸರ್ಕಾರ ಮುಂದಾಗದಿರುವುದರಿಂದ ವಿಚಲಿತರಾಗಿರುವ ಪ್ರತಿಭಟನಾಕಾರರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸೇರಿದ ಸಾರಿಗೆ ನಿಗಮ ನೌಕರರು ಪ್ರತಿಭಟನೆ ನಡೆಸಿ ಆರನೇ ವೇತನ ಆಯೋಗದ ಅನ್ವಯ ವೇತನ ಜಾರಿಗೊಳಿಸುವಂತೆ ಆಗ್ರಹಿಸಿದ್ದು ಪೊಲೀಸರು ಪ್ರತಿಭಟನೆ ನಡೆಸಿದ ನೌಕರರನ್ನು ಬಂಧಿಸಿದ್ದಾರೆ.
ಶೇ.೪೦ರಷ್ಟು ಸಂಚಾರ:
ದಿನದಿಂದ ದಿನಕ್ಕೆ ಬಸ್ ಸಂಚಾರ ಹೆಚ್ಚುತ್ತಿರುವ ಬೆನ್ನಲ್ಲೇ ಶೇ.೪೦ರಷ್ಟು ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಆರಂಭಿಸಿವೆಯಾದರೂ ಪ್ರಯಾಣಿಕರ ಪರದಾಟ ಮಾತ್ರ ತಗ್ಗಿಲ್ಲ. ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ ೧೨ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ನಡುವೆ ಪ್ರಯಾಣಿಕರನ್ನು ಸೆಳೆಯಲು ಪೈಪೋಟಿ ನಡೆದಿದ್ದು, ಚಾಲಕರು, ನಿರ್ವಾಹಕರ ನಡುವೆ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಮಾತಿನ ಚಕಮಕಿ ನಡೆದಿದೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮುಷ್ಕರ ಮುಂದುವರೆಸಿರುವುದರಿಂದ ಸಾರಿಗೆ ನೌಕರರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಮುಷ್ಕರ ನಡೆಸುವುದು ಎಷ್ಟು ಸಮಂಜಸ ಎಂದು ಹಲವು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಈ ನಡುವೆ ಸರ್ಕಾರ ನಮ್ಮ ಮುಷ್ಕರವನ್ನು ತಿರಸ್ಕಾರದಿಂದ ನೋಡುತ್ತಿದ್ದು ಬೇಡಿಕೆಗಳು ಈಡೇರುವವರೆಗೂ ಶಾಂತಿಯುತ ಪ್ರತಿಭಟನೆ ಮುಂದುವರೆಯಲಿದೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.