ಸಾರಿಗೆ ನೌಕರರ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತೆಲ್ಕೂರ್ ವಾಗ್ದಾಳಿ

ಕಲಬುರಗಿ:ಏ.7: ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾರಿಗೆ ನೌಕರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಶಾಸಕ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ ಹರಿಹಾಯ್ದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆಯ ಕುರಿತು ಮಾಹಿತಿಯೇ ಇಲ್ಲದವರು ಹೋರಾಟದ ನೇತೃತ್ವ ವಹಿಸಿಕೊಂಡಿದ್ದಾರೆ. ಇಲಾಖೆಯ ಕುರಿತು ಮಾಹಿತಿ ಇರುವವರಿಗೆ ಹೋರಾಟದ ನೇತೃತ್ವ ವಹಿಸಿದರೆ ಒಳ್ಳೆಯದು ಎಂದು ಲೇವಡಿ ಮಾಡಿದರು.
ಉತ್ಸಾಹದಿಂದ ಸಾರ್ವಜನಿಕರಿಗೆ ಸೇವೆ ನೀಡಲು ಮುಂದೆ ಬರುವ ಸಾರಿಗೆ ಸಿಬ್ಬಂದಿಗಳ ಮೇಲೆ ದಬ್ಬಾಳಿಕೆ ಮಾಡಿದರೆ, ಸಾರಿಗೆ ನಿಗಮಗಳ ಆಸ್ತಿ- ಪಾಸ್ತಿಗೆ ಹಾನಿಯುಂಟು ಮಾಡಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.
ಮಹಾಮಾರಿ ಕೊರೋನಾ ಭೀತಿಯಿಂದಾಗಿ ಕಳೆದ ವರ್ಷವೂ ಸಹ ಸಾಕಷ್ಟು ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಅಂತಹ ಸಂಕಷ್ಟದಲ್ಲಿಯೂ ಸಹ ರಾಜ್ಯ ಸರ್ಕಾರವು ಸಾರಿಗೆ ನೌಕರರ ವೇತನವನ್ನು ಪಾವತಿಸಿದೆ. ಅದೇ ಹೊರ ರಾಜ್ಯಗಳಲ್ಲಿ ಸಾರಿಗೆ ನೌಕರರ ವೇತನವನ್ನು ಕೊಟ್ಟಿಲ್ಲ. ಆ ಕುರಿತು ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದಿಸಿ, 8 ಬೇಡಿಕೆಗಳನ್ನು ಇಡೇರಿಸಿದ್ದಾರೆ. ನೌಕರರ ವೇತನ ಹೆಚ್ಚಳದ ಕುರಿತು ಭರವಸೆ ನೀಡಿದ್ದಾರೆ. ಉಪ ಚುನಾವಣೆ ಇರುವುದರಿಂದ ಈಗ ಏನನ್ನೂ ಹೇಳಲು ಬರುವಂತಿಲ್ಲ. ಆದ್ದರಿಂದ ಕೂಡಲೇ ಸಾರಿಗೆ ನೌಕರರು ಮುಷ್ಕರವನ್ನು ಕೈಬಿಟ್ಟು ಕೆಲಸಕ್ಕೆ ಮರಳಬೇಕು ಎಂದು ಅವರು ಮನವಿ ಮಾಡಿದರು.
ಖರ್ಗೆ ವಿರುದ್ಧ ಟೀಕೆ: ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ಸಂಘ, ಪರಿವಾರದ ಕುರಿತು ಹಾಗೂ ಬಿಜೆಪಿ ನಾಯಕರ ಕುರಿತು ಹದ್ದುಮೀರಿ ಟೀಕೆ ಮಾಡುತ್ತಿರುವುದನ್ನು ಪ್ರಶ್ನಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ್ ಕಟಿಲ್ ಅವರು ಪ್ರತ್ಯುತ್ತರ ನೀಡಿದ್ದಾರೆ. ಆದಾಗ್ಯೂ, ಕಟಿಲ್ ಅವರಿಗೆ ಕಾಂಗ್ರೆಸ್ ನಾಯಕರು ಆಕ್ಷೇಪಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಹೇಳಿದರು.
ತಮಿಳ್ನಾಡು ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆಯಲ್ಲಿ ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ಸಂಘ, ಪರಿವಾರದವರ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದರು. ಅದನ್ನು ಯಾರೂ ಸಹಿಸಲಾರರು. ಅದಕ್ಕೆ ಆಕ್ಷೇಪಿಸಿ ಖರ್ಗೆಯವರ ವಿರುದ್ಧ ಕಟಿಲ್ ಅವರು ಮಾತನಾಡಿದ್ದಾರೆ. ಮೊದಲು ಕಾಂಗ್ರೆಸ್ ನಾಯಕರು ಖರ್ಗೆಯವರಿಗೆ ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಟೀಕಿಸುವಂತೆ ಒತ್ತಾಯಿಸಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ 500 ಕೋಟಿ ರೂ.ಗಳ ಸಾಲ: ಕಲಬುರ್ಗಿ- ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ರೈತರಿಗೆ ಸುಮಾರು 500 ಕೋಟಿ ರಊ.ಗಳ ಸಾಲ ನೀಡಲು ನಿರ್ಧರಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರೂ ಆದ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ರಿಜರ್ವ್ ಬ್ಯಾಂಕ್ ನಿರ್ದೇಶನದಂತೆ ಸಹಕಾರಿ ಬ್ಯಾಂಕ್‍ಗಳು ಕೃಷಿ ಕ್ಷೇತ್ರಕ್ಕೆ ಶೇಕಡಾ 40ರಷ್ಟು ಹಾಗೂ ವಾಣಿಜ್ಯಕ ಕ್ಷೇತ್ರಕ್ಕೆ ಶೇಕಡಾ 60ರಷ್ಟು ಸಾಲ ನೀಡಬೇಕು. ಆದಾಗ್ಯೂ, ಜಿಲ್ಲಾ ಸಹಕಾರ ಬ್ಯಾಂಕ್ ರೈರರಿಗೆ ಹೈನುಗಾರಿಕೆ ಮತ್ತು ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳಲು 500 ಕೋಟಿ ರೂ.ಗಳ ಸಾಲ ನೀಡಲು ಉದ್ದೇಶಿಸಿದೆ ಎಂದು ಅವರು ತಿಳಿಸಿದರು.
ಬ್ಯಾಂಕ್ ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಬ್ಯಾಂಕಿನ ವಹಿವಾಟು ಎರಡು ಪಟ್ಟು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬ್ಯಾಂಕ್ ಕಳೆದ 114 ವರ್ಷಗಳಲ್ಲಿ ನಿಗದಿತ ರೈತರಿಗೆ ತಲುಪಿಲ್ಲ. ಅಲ್ಲದೇ ಭಾರೀ ಪ್ರಮಾಣದಲ್ಲಿ ನಷ್ಟ ಹೊಂದಿದೆ. ಹೀಗಾಗಿ ಬ್ಯಾಂಕ್ ಪುನಶ್ಚೇತನಕ್ಕೆ ಆದ್ಯತೆ ಕೊಡುವುದಾಗಿ ತಿಳಿಸಿದರು.
ಇನ್ನು ಮುಂದೆ ಗ್ರಾಮೀಣ ಪ್ರದೇಶಗಳಲ್ಲಿ ವಾರದ ಏಳು ದಿನವೂ ಮೊಬೈಲ್ ಬ್ಯಾಂಕ್ ಸಂಚರಿಸಲಿವೆ. ಒಟ್ಟು ಎರಡು ಮೊಬೈಲ್ ಬ್ಯಾಂಕ್ ವಾಹನಗಳಿದ್ದು, ಗ್ರಾಮೀಣ ಪ್ರದೇಶದ ಜನರು ಎಟಿಎಂ ಸೇವೆ, ಕಂದಾಯ ಬಿಲ್, ವಿದ್ಯುತ್ ಬಿಲ್, ಮನೆ ಕರ ಸೇರಿದಂತೆ ವಿವಿಧ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ರೈತರು ಹಾಗೂ ವ್ಯಾಪಾರಸ್ಥರು ಬ್ಯಾಂಕ್‍ನಲ್ಲಿ ಖಾತೆ ಹೊಂದಬಹುದಾಗಿದೆ ಎಂದು ಅವರು ಹೇಳಿದರು.
ಬ್ಯಾಂಕಿನ ವ್ಯಾಪ್ತಿಯಲ್ಲಿ ಬರುವ 200 ಸಹಕಾರಿ ಪ್ರಾಥಮಿಕ ಸಂಘಗಳು ಸದ್ಯ ಚಾಲ್ತಿಯಲ್ಲಿದ್ದು, ಇನ್ನುಳಿದಂತೆ ಹಲವು ಬ್ಯಾಂಕ್‍ಗಳು ರೋಗಗ್ರಸ್ಥಗೊಂಡಿವೆ. ಅವುಗಳಿಗೆ ಪುನಶ್ಚೇತನಗೊಳಿಸುವುದಾಗಿ ತಿಳಿಸಿದ ಅವರು, ಬ್ಯಾಂಕ್‍ನಲ್ಲಿ ಸುಧಾರಿತ ಆಡಳಿತ ನೀಡಲು ಸಾಫ್ಟವೇರ್ ಅಳವಡಿಕೆ, ಸಿಬ್ಬಂದಿಗಳಿಗೆ ಬೋನಸ್, ಹೊಸ ತಾಲ್ಲೂಕುಗಳಲ್ಲಿ ಬ್ಯಾಂಕ್ ಶಾಖೆಗಳನ್ನು ಯುಗಾದಿಯೊಳಗೆ ಆರಂಭಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್, ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಮತ್ತು ಜಿಲ್ಲಾ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರು, ಮುಂತಾದವರು ಉಪಸ್ಥಿತರಿದ್ದರು.