
ಕಲಬುರಗಿ.ಏ.7:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಯು ಏಪ್ರಿಲ್ 7 ರಿಂದ ಅನಿರ್ಧಿಷ್ಠಾವಧಿವರೆಗೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಮತ್ತು ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಒದಗಿಸಲು ಅನುಕೂಲವಾಗುವಂತೆ ಖಾಸಗಿ ಪ್ರಯಾಣಿಕ ವಾಹನಗಳಾದ ಮ್ಯಾಕ್ಸಿಕ್ಯಾಬ್, ಕಾಂಟ್ರ್ಯಾಕ್ಟ್ ಕ್ಯಾರೇಜ್ ಬಸ್, ಶಾಲಾ ಬಸ್ ಹಾಗೂ ಪಿಎಸ್ವಿ ಬಸ್ಗಳಿಗೆ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 66(1)ರಂತೆ ಅಗತ್ಯವಿರುವ ರಹದಾರಿ (ಪರ್ಮೀಟ್) ಯಿಂದ ವಿನಾಯಿತಿ ನೀಡಲಾಗಿದೆ ಎಂದು ಕಲಬುರಗಿ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಉಪ ಸಾರಿಗೆ ಆಯುಕ್ತರಾದ ಬಿ. ನೂರ್ ಮಹಮ್ಮದ್ ಬಾಷಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾಸಗಿ ಪ್ರಯಾಣಿಕರ ವಾಹನಗಳಾದ ಮ್ಯಾಕ್ಸಿಕ್ಯಾಬ್, ಕಾಂಟ್ರ್ಯಾಕ್ಟ್ ಕ್ಯಾರೇಜ್ ಬಸ್, ಶಾಲಾ ಬಸ್ ಹಾಗೂ ಪಿಎಸ್ವಿ ಬಸ್ಗಳ ಮೂಲಕ ಮುಷ್ಕರ ಅವಧಿಯಲ್ಲಿ ಸಾರ್ವಜನಿಕರಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಾಗೂ ಖಾಸಗಿ ಪ್ರಯಾಣಿಕ ವಾಹನಗಳ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗುವಂತೆ ರಹದಾರಿ (ಪರ್ಮಿಟ್) ಯಿಂದ ವಿನಾಯಿತಿ ನೀಡಿ ದಿನಾಂಕ: 07-04-2021 ರಂದು ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಮೇಲ್ಕಂಡ ಖಾಸಗಿ ಪ್ರಯಾಣಿಕರ ವಾಹನಗಳ ಮಾಲೀಕರು ಇದರ ಸದುಪಯೋಗ ಪಡೆದುಕೊಂಡು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಾರಿಗೆ ಸೌಲಭ್ಯ ಒದಗಿಸಬೇಕೆಂದು ಅವರು ತಿಳಿಸಿದ್ದಾರೆ.