ಸಾರಿಗೆ ನೌಕರರಿಗೆ 6ನೇ ವೇತನ ಜಾರಿಗೊಳಿಸಲು ಲಿಂಗಾಯತ ಮಹಾಸಭೆಯ ಆಗ್ರಹ

ಕಲಬುರಗಿ.ಏ.20:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ 6ನೇ ವೇತನ ಆಯೋಗ ಜಾರಿ ಮಾಡಬೇಕು. ಅಥವಾ ಸಮಾನವಾದ ವೇತನ ಪರಿಷ್ಕರಣೆಗೊಳಿಸಿ ಸಾರ್ವಜನಿಕರಿಗೆ ಸರ್ಕಾರಿ ಸಾರಿಗೆ ಸಂಪರ್ಕ ಕಲ್ಪಿಸಬೇಕು ಎಂದು ಅಖಿಲ ಭಾರತ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಪ್ರಭುಲಿಂಗ್ ಎಸ್. ಮಹಾಗಾಂವಕರ್ ಅವರು ಒತ್ತಾಯಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಅವರು, ವೇತನ ತಾರತಮ್ಯವನ್ನು ಹೊಗಲಾಡಿಸಲು ಹಾಗೂ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಾದ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿಗಳು ಮತ್ತು ಇತರೆ ಸಿಬ್ಬಂಧಿಗಳು ದಿನಾಂಕ:07.04.2021 ರಿಂದ ಇಂದಿನವರೆಗೂ ಸಾರಿಗೆ ಮುಷ್ಕರ ಮಾಡುತ್ತಿದ್ದು, ಗ್ರಾಮೀಣ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಒದಗಿಸುವ ಸರ್ಕಾರಿ ಸಾರಿಗೆ ವ್ಯವಸ್ಥೆಯು ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಕರ್ನಾಟಕದ ರೈತರಿಗೆ, ವ್ಯವಹಾರಸ್ಥರಿಗೆ, ಶಾಲಾ-ಕಾಲೇಜು ವಿದ್ಯಾರ್ಧಿಗಳಿಗೆ, ಸರ್ಕಾರಿ ಉದ್ಯೋಗಸ್ಥರಿಗೆ ಮತ್ತು ವಿಶೇಷವಾಗಿ ರೋಗಿಗಳಿಗೆ ಹಾಗೂ ಇತರೇ ತುರ್ತು ಅವಶ್ಯಕತೆಗಳಿಗಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವ ಇನ್ನಿತರ ಸಾರ್ವಜನಿಕರಿಗೆ ಕಳೆದ ಸತತ 12 ದಿನಗಳಿಂದ ತುಂಬಾ ಅಡಚಣೆ ಉಂಟಾಗಿ ಅನಾನುಕೂಲವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾರ್ವಜನಿಕರ ಸೇವೆಗಾಗಿಯೇ ಸರ್ಕಾರಿ ಸಾರಿಗೆ ನಿಗಮಗಳು ಕಾರ್ಯನಿರ್ವಹಿಸುತ್ತಿದ್ದು, ಇಂತಹ ಕಾರ್ಯನಿರ್ವಹಣೆಗೆ ಅವಶ್ಯವಿರುವ ಚಾಲಕ, ನಿರ್ವಾಹಕ, ತಾಂತ್ರಿಕ ಮತ್ತು ಇತರೆ ಸಿಬ್ಬಂಧಿಗಳನ್ನು ಸಾರ್ವಜನಿಕ ವಲಯದಲ್ಲಿರುವ ಅರ್ಹ ಅಭ್ಯರ್ಧಿಗಳಿಂದಲೇ ನೇಮಕಾತಿ ಮಾಡಿಕೊಂಡಿರುತ್ತಿರಿ. ಆದ್ದರಿಂದ ಸಾರ್ವಜನಿಕರ ಸಾರಿಗೆ ಸೇವೆಗೆಂದೆ ನೇಮಕಗೊಂಡಿರುವ ರಸ್ತೆ ಸಾರಿಗೆ ನಿಗಮಗಳ ನೌಕರರು ಕೂಡ ಸಾರ್ವಜನಿಕರೆ ಆಗಿದ್ದು, ಇವರಿಗೆ ಸಾಮಾಜಿಕ ನ್ಯಾಯದಡಿಯಲ್ಲಿ ಬರುವ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡುವುದು ಸರ್ಕಾರದ ಸಾಮಾಜಿಕ ಜವಾಬ್ದಾರಿಯೇ ಆಗಿದೆ ಎಂದು ಅವರು ಹೇಳಿದರು.
ಆದ್ದರಿಂದ ಸರ್ಕಾರಿ ನೌಕರರಂತೆ ರಸ್ತೆ ಸಾರಿಗೆ ನಿಗಮಗಳ ನೌಕರರಿಗೂ ಕೂಡ 6ನೇ ವೇತನ ಆಯೋಗವನ್ನು ಜಾರಿ ಮಾಡುವುದು ಅಥವಾ ನಿಗಮಗಳಿಗೆ ಅನ್ವಯಿಸುವ ಕಾರ್ಮಿಕ ಕಾಯ್ದೆಗಳ ಅನುಸಾರದಂತೆ 6ನೇ ವೇತನ ಆಯೋಗಕ್ಕೆ ಸಮಾನವಾದ ವೇತನ ಪರಿಷ್ಕರಣೆಯನ್ನಾದರೂ ಮಾಡುವುದು ಅಥವಾ ಆಡಳಿತ ಮಟ್ಟದಲ್ಲಿ ಅನ್ವಯವಾಗುವ ಇನ್ನಿತರ ರೀತಿಯ ಕಾಯ್ದೆ ಕಾನೂನುಗಳನ್ನು ಅಳವಡಿಸಿಕೊಂಡು ಸಾರಿಗೆ ನಿಗಮಗಳ ನೌಕರರಿಗೆ ಆಗುತ್ತಿರುವ ವೇತನ ತಾರತಮ್ಯವನ್ನು ನಿವಾರಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಸಾರ್ವಜನಿಕರಿಗೆ ಅನುಕೂಲಕರವಾದ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಮತ್ತೆ ಹಿಂದಿನ ರೀತಿಯಲ್ಲಿ ಸಮರ್ಪಕವಾಗಿ ಚಾಲ್ತಿಯಲ್ಲಿರುವಂತೆ ಅತೀ ಜರೂರಾಗಿ ಸೂಕ್ತ ನಿರ್ಧಾರ ಕೈಗೊಳ್ಳಲು ನಾಲ್ಕು ಸಾರಿಗೆ ನಿಗಮಗಳ ಎಲ್ಲ ನೌಕರರ ಕ್ಷೇಮಾಭಿವೃದ್ದಿಯ ಹಿತದೃಷ್ಟಿಯಿಂದ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಹಾಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಗಾರ್ ಮುಂತಾದವರು ಉಪಸ್ಥಿತರಿದ್ದರು.