ಸಾರಿಗೆ ನೌಕರರಿಗೆ ಹಣ ಬಿಡುಗಡೆ


ಬೆಂಗಳೂರು ನ. ೧೭:ಸಾರಿಗೆ ಸಿಬ್ಬಂದಿಗೆ ಸಂಬಳ ನೀಡಲು ಸರ್ಕಾರದಿಂದ ಹಣ ಬಿಡುಗಡೆ ಮಾಡುವ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ೩ ತಿಂಗಳುಗಳ ಸಂಬಳದ ಒಟ್ಟು ಮೊತ್ತವಾದ ೬೩೪ ಕೋಟಿ ೫೦ ಲಕ್ಷ ರೂ. ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ೩ ತಿಂಗಳುಗಳ ವೇತನಗಳ ಮೊತ್ತ ೬೩೪ ಕೋಟಿ ೫೦ ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿ
ಕೊಂಡರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ಅಕ್ಟೋಬರ್, ನವಂಬರ್ ಹಾಗೂ ಡಿಸೆಂಬರ್ ಈ ೩ ತಿಂಗಳುಗಳ ಸಂಬಳದ ಒಟ್ಟು ಮೊತ್ತವಾದ ೬೩೪ ಕೋಟಿ ೫೦ ಲಕ್ಷ ರೂ. ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದರಿಂದಾಗಿ ಸಾರಿಗೆ ಸಿಬ್ಬಂದಿಗಳ ಒಟ್ಟು ಮೂರು ತಿಂಗಳುಗಳ ಶೇಕಡ ೭೫ ರಷ್ಟು ವೇತನದ ಮೊತ್ತ ೬೩೪.೫೦ ರೂಪಾಯಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಕ್ರಮ ಕೈಗೊಂಡಂತಾಗಿದೆ. ಉಳಿದ ಶೇಕಡ ೨೫ ರಷ್ಟು ವೇತನಗಳನ್ನು ಸಾರಿಗೆ ಸಂಸ್ಥೆಗಳೇ ತಮ್ಮ ಸಂಪನ್ಮೂಲಗಳಿಂದ ಭರಿಸಲಿವೆ.
ಇದರಿಂದಾಗಿ ಕೆಎಸ್‌ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳ ಸುಮಾರು ೧,೩೦,೦೦೦ ಸಿಬ್ಬಂದಿಗಳಿಗೆ ವೇತನ ಪಾವತಿಗೆ ಸಾಧ್ಯವಾದಂತಾಗಿದೆ. ಕೋವಿಡ್ ನಂತರದಲ್ಲೂ ಸಾರಿಗೆ ಸಂಸ್ಥೆಗಳ ಆದಾಯ ಶೇಕಡ ೩೦ ರಷ್ಟನ್ನು ಮೀರದಿರುವುದರಿಂದ ಸಾರಿಗೆ ಸಂಸ್ಥೆಗಳ ಸಂಪನ್ಮೂಲಕ್ಕೆ ತೀವ್ರನಷ್ಟ ಉಂಟಾಗಿದ್ದರಿಂದ ಸವದಿ ಅವರು ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ಅವರ ಮನವೊ ಲಿಸಿದ್ದಾರೆ. ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ವೇತನ ಪಾವತಿಗೆ ಕ್ರಮಕೈಗೊಂಡ ಮುಖ್ಯಮಂತ್ರಿಯವರ ಕ್ರಮಕ್ಕೆ ಸವದಿಯವರು ಸಾರಿಗೆ ಸಂಸ್ಥೆಗಳ ಪರವಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.