ಸಾರಿಗೆ ನೌಕರರಿಗೆ ಆರನೇ ವೇತನ ಜಾರಿಗೊಳಿಸಲು ಪಟ್ಟೇದಾರ್ ಆಗ್ರಹ

ಕಲಬುರಗಿ,ಏ.15: ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗದ ಶ್ರೇಣಿಯನ್ನು ಜಾರಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಹಿರಿಯ ದಲಿತ ಧುರೀಣ ಗುರುಶಾಂತ್ ಪಟ್ಟೇದಾರ್ ಅವರು ಒತ್ತಾಯಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರನೇ ವೇತನ ಕೊಡದೇ ರಾಜ್ಯ ಸರ್ಕಾರವು ಸಾರಿಗೆ ನೌಕರರಿಗೆ ದ್ರೋಹ ಮಾಡಿದೆ. ರಸ್ತೆ ಸಾರಿಗೆ ನಿಗಮಗಳ ನೌಕರರು ಕಳೆದ 9 ದಿನಗಳಿಂದಲೂ ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೂ ಹಾಗೂ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಪ್ರಯಾಣಿಕರಂತೂ ಬಸ್ಸಿಗಾಗಿ ನರಳಾಡುತ್ತಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
8 ದಿನಗಳ ಮುಷ್ಕರದ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಗೆ ಸುಮಾರು 100 ಕೋಟಿ ರೂ.ಗಳ ನಷ್ಟ ತೋರಿಸಲಾಗಿದೆ. ಅದೇ 100 ಕೋಟಿ ರೂ.ಗಳಲ್ಲಿ ಆರನೇ ವೇತನವನ್ನು ಸಾರಿಗೆ ನೌಕರರಿಗೆ ಕೊಡಬಹುದಾಗಿತ್ತು. ಈಗ ಸಾರಿಗೆ ನೌಕರರು ಬೀದಿಗೆ ಬಿದ್ದು ಭಿಕ್ಷಾಟನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದಾಗ್ಯೂ, ಅವರ ಬೇಡಿಕೆಗೆ ಸ್ಪಂದಿಸದೇ ರಾಜ್ಯ ಸರ್ಕಾರವು ನೌಕರರಿಗೆ ಅಮಾನತ್ತುಗೊಳಿಸುವುದು, ವಜಾಗೊಳಿಸುವುದು, ಬೆದರಿಕೆ ಹಾಕುವುದು ಮುಂತಾದ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿದೆ ಎಂದು ಅವರು ದೂರಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ವೇತನ ನೀಡುವುದನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದ್ದಾರೆ. ಇಬ್ಬರಿಗೂ ಸಾರಿಗೆ ನೌಕರರ ಕುರಿತು ಯಾವುದೇ ರೀತಿಯಲ್ಲಿ ಕಾಳಜಿ ಇಲ್ಲವಾಗಿದೆ. ಕೂಡಲೇ ಬಿಜೆಪಿ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು 6ನೇ ವೇತನ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಇನ್ನು ಕೇಂದ್ರ ಸರ್ಕಾರವಂತೂ ರೈತ ವಿರೋಧಿಯಾಗಿದೆ. ರಸಗೊಬ್ಬರ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ದ್ರೋಹ ಎಸಗಿದ್ದಾರೆ. ಡಿಎಪಿ, ಯೂರಿಯಾ ಮುಂತಾದ ರಸಗೊಬ್ಬರಗಳ ಬೆಲೆಗಳು ಗಗನಕ್ಕೇರಿದ್ದು ದುರಂತದ ಸಂಗತಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಈಗಾಗಲೇ ಪೆಟ್ರೋಲ್, ಡೀಸೆಲ್, ಮನೆ ಬಳಕೆ ಗ್ಯಾಸ್ ಸಿಲೆಂಡರ್ ದರಗಳು ಏರಿಕೆಯಾಗಿವೆ. ಇದರಿಂದ ಜನರು ಹಿಡಿಶಾಪ ಹಾಕಿ ರೊಚ್ಚಿಗೇಳುವ ದಿನಗಳು ದೂರ ಇಲ್ಲ ಎಂದು ಎಚ್ಚರಿಸಿರುವ ಅವರು, ಈಗಾಗಲೇ ದೇಶದ ಸ್ವತ್ತನ್ನು ಮಾರಾಟ ಮಾಡುತ್ತಿದ್ದು, ಬಿಎಸ್‍ಎನ್‍ಎಲ್, ಏರ್ ಇಂಡಿಯಾ ಹತ್ತು ಹಲವು ಕಂಪೆನಿಗಳನ್ನು ಮಾರಾಟ ಮಾಡಿ ಖಾಸಗಿಯಾಗಿ ಅನಿಲ್ ಅಂಬಾನಿ ಮತ್ತು ಗೌತಮ್ ಅಂಬಾನಿ ಅಲ್ಲದೇ ಇನ್ನೂ ಕೆಲ ಕಂಪೆನಿಗಳಿಗೆ ದೇಣಿಗೆಯಾಗಿ ಕೊಟ್ಟಿದ್ದಾರೆ. ಪ್ರತಿಶತ: 75ದಂತೆ ಮಾರಾಟ ಮಾಡಿದ್ದಾರೆ. ಇನ್ನುಳಿದ ಶೇಕಡಾ 25ರಷ್ಟು ದೇವರೇ ಗತಿ. ಅನೇಕ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಸಹ ಸಂಸದರು ಮೂಕ ಪ್ರೇಕ್ಷಕರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಸಾರ್ವಜನಿಕರು ಧಿಕ್ಕಾರ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.