
ಬೆಂಗಳೂರು,ಮಾ.೧೬:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವೇತನ ಬೇಡಿಕೆಗೂ ಸರ್ಕಾರ ಅಸ್ತು ಎಂದಿದ್ದು, ರಾಜ್ಯರಸ್ತೆ ಸಾರಿಗೆ ನೌಕರರಿಗೆ ಶೇ. ೧೫ ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ವೇತನ ಪರಿಷ್ಕರಣೆಯ ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಶೇ. ೧೫ ರಷ್ಟು ವೇತನ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದರು.
ವಿದ್ಯುತ್ ಇಲಾಖೆ ನೌಕರರಿಗೂ ಶೇ. ೨೦ ರಷ್ಟು ವೇತನ ಹೆಚ್ಚಳಕ್ಕೆ ನಿನ್ನೆ ತೀರ್ಮಾನ ಮಾಡಿದ್ದೇವೆ. ಇಂದು ಕೆಎಸ್‌ಆರ್‌ಟಿಸಿ ನೌಕರರಿಗೂ ಶೇ. ೧೫ ರಷ್ಟು ವೇತನ ಏರಿಸುವ ತೀರ್ಮಾನವನ್ನು ಮಾಡಲಾಗಿದೆ. ಈ ಎರಡೂ ತೀರ್ಮಾನದ ಸರ್ಕಾರಿ ಆದೇಶವನ್ನು ಇಂದೇ ಹೊರಬೀಳಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕೆಎಸ್‌ಆರ್‌ಟಿಸಿ ನೌಕರರು ಕಳೆದ ೩-೪ ವರ್ಷಗಳಿಂದ ವೇತನ ಪರಿಷ್ಕರಣೆಯಾಗಿಲ್ಲ ಎಂದು ಹೇಳಿ ವೇತನ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ಶೇ. ೧೫ ರಷ್ಟು ವೇತನವನ್ನು ಏರಿಸುವ ತೀರ್ಮಾನ ಮಾಡಿರುವುದಾಗಿ ಅವರು ಹೇಳಿದರು.
ಸಾರಿಗೆ ನೌಕರರ ಮುಷ್ಕರ ವಾಪಸ್ ಸಾಧ್ಯತೆ
ರಾಜ್ಯ ರಸ್ತೆ ಸಾರಿಗೆ ನೌಕರರ ವೇತನವನ್ನು ಶೇ. ೧೫ ರಷ್ಟು ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿರುವ ಬೆನ್ನಲ್ಲೆ ಯುಗಾದಿ ಹಬ್ಬದ ಮುನ್ನಾದಿನವಾದ ಮಾ. ೨೧ ರಿಂದ ಸಾರಿಗೆ ನೌಕರರ ಅನಿರ್ದಿಷ್ಟ ಮುಷ್ಕರವನ್ನು ನಡೆಸಬೇಕೇ ಬೇಡವೇ ಎಂಬ ಬಗ್ಗೆ ಇಂದು ನೌಕರರ ಸಂಘಟನೆಯ ಜಂಟಿ ಕ್ರಿಯಾ ಸಮಿತಿಯ ಸಭೆಯಲ್ಲಿ ತೀರ್ಮಾನ ಆಗಲಿದ್ದು, ಮುಷ್ಕರ ಬಹುತೇಕ ವಾಪಸ್ಸಾಗುವ ಸಾಧ್ಯತೆಗಳಿವೆ.
ಸಾರಿಗೆ ನೌಕರರ ೬ ಸಂಘಟನೆಗಳ ಕ್ರಿಯಾಸಮಿತಿಯ ಸಭೆಯನ್ನು ಇಂದು ಮಧ್ಯಾಹ್ನ ಕರೆದಿದ್ದೇವೆ. ಈ ಸಭೆಯಲ್ಲಿ ಸರ್ಕಾರದ ತೀರ್ಮಾನ, ನೌಕರರ ವೇತನ ಪರಿಷ್ಕರಣೆಯ ಆದೇಶದಲ್ಲಿ ಏನೆಲ್ಲ ಸಂಶಗಳಿವೆ ಎಂಬುದನ್ನು ನೋಡಿಕೊಂಡು ಮುಷ್ಕರ ನಡೆಸಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಸಂಜೆಯ ಹೊತ್ತಿಗೆ ಮುಷ್ಕರದ ಬಗ್ಗೆ ತೀರ್ಮಾನ ಪ್ರಕಟಿಸುವುದಾಗಿ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್ ತಮ್ಮನ್ನು ಸಂಪರ್ಕಿಸಿದ ’ಸಂಜೆ ವಾಣಿ’ಗೆ ತಿಳಿಸಿದರು.
ವೇತನ ಪರಿಷ್ಕರಣೆಯ ಸಂಬಂಧ ನಿನ್ನೆ ರಾತ್ರಿಯವರೆಗೂ ನೌಕರರ ಸಂಘದ ಜಂಟಿ ಕ್ರಿಯಾಸಮಿತಿ ಮುಖಂಡರ ಜತೆ ಅಧಿಕಾರಿಗಳು ಸಭೆ ನಡೆಸಿದ್ದರು. ನಾವು ಶೇ. ೨೫ ರಷ್ಟು ವೇತನ ಬೇಡಿಕೆ ಇಟ್ಟಿದ್ದೆವು. ಅದಕ್ಕೆ ಅಧಿಕಾರಿಗಳು ಒಪ್ಪಲಿಲ್ಲ. ಆಗ ಶೇ. ೨೦ ರಷ್ಟಾದರೂ ವೇತನ ಏರಿಕೆ ಮಾಡಲೇಬೇಕು ಎಂದು ಹೇಳಿದ್ದೆವು. ಅಧಿಕಾರಿಗಳು ಮುಖ್ಯಮಂತ್ರಿಗಳ ಜತೆ ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಹಾಗಾಗಿ, ನಿನ್ನೆಯ ಸಭೆ ಅಪೂರ್ಣವಾಗಿತ್ತು. ಆದರೆ,ಇಂದು ಬೆಳಿಗ್ಗೆ ಏಕಪಕ್ಷೀಯವಾಗಿ ಮುಖ್ಯಮಂತ್ರಿಗಳು ಶೇ. ೧೫ ರಷ್ಟು ವೇತನ ಏರಿಕೆಯ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ನಾವು ಆರು ನೌಕರರ ಸಂಘಟನೆಯ ಪದಾಧಿಕಾರಿಗಳ ಜತೆ ಚರ್ಚಿಸಿ ವೇತನ ಹೆಚ್ಚಳದ ಆದೇಶದಲ್ಲಿ ಏನೆಲ್ಲ ಇದೆ ಎಂಬುದನ್ನು ನೋಡಿಕೊಂಡು ಮುಷ್ಕರದ ಬಗ್ಗೆ ಒಂದು ತೀರ್ಮಾನಕ್ಕೆ ಬರುವುದಾಗಿ ಹೇಳಿದರು.