ಸಾರಿಗೆ ನೌಕರರಿಂದ ಭಿತ್ತಿಪತ್ರ ಪ್ರದರ್ಶನ: ವೇತನ ಪರಿಷ್ಕರಣೆಗೂ ಒತ್ತಾಯ

ಹೊಸಪೇಟೆ, ಏ.04: ಆರನೇ ವೇತನ ಆಯೋಗದಂತೆ ವೇತನ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರ ಸಂಘದ ಕೂಟದ ನೇತೃತ್ವದಲ್ಲಿ ತಹಶೀಲ್ದಾರ ಕಚೇರಿ ಎದುರು ಸಾರಿಗೆ ನೌಕರರು, ಶನಿವಾರ ಭಿತ್ತಿಪತ್ರ ಪ್ರದರ್ಶನ ಮಾಡಿದರು.
ನಗರದ ಬಸ್‍ನಿಲ್ದಾಣದಿಂದ ಕೈಗೆ ಕಪ್ಪುಪಟ್ಟಿ ಧರಿಸಿ ಮೌನವಾಗಿ ತಹಶೀಲ್ದಾರರ ಕಚೇರಿಗೆ ತೆರಳಿದ ನೌಕರರು ತಮ್ಮ ಕುಟುಂಬ ಸದಸ್ಯರೊಂದಿಗೆ ಭಿತ್ತಿಪತ್ರ ಪ್ರದರ್ಶನ ಮಾಡಿದರು ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿದರು.
ಸಾರಿಗೆ ನೌಕರರ ರಾಜ್ಯ ಕೂಟದ ಅಧ್ಯಕ್ಷ ಚಂದ್ರಶೇಖರ ಮಾತನಾಡಿ, ರಾಜ್ಯ ಸರಕಾರ ಮೂರು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದಾಗ 9 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಆದರೆ ಈ ವರೆಗೂ ಬೇಡಿಕೆಯನ್ನು ಈಡೇರಿಸಿಲ್ಲ. ಹೀಗಾಗಿ ಏಪ್ರಿಲ್ 7ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ತಿಳಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಅಷ್ಟರಲ್ಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಸಾರಿಗೆ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಾರಿಗೆ ನೌಕರರ ಸಂಘದ ಬಾಬುರಾಜ್, ಯೋಗೇಶ್, ಸುಧಾಕರ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಜೆ. ಕಾರ್ತಿಕ್, ನಗರ ಘಟಕದ ಅಧ್ಯಕ್ಷ ನಾಗರಾಜ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಂಧನಕ್ಕೆ ಸೂಚನೆ:
ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳು ತಮ್ಮ ಮನವಿಪತ್ರ ಸ್ವೀಕಾರಕ್ಕೆ ಸಾರಿಗೆ ವಿಭಾಗಾಧಿಕಾರಿಯನ್ನು ಕರೆಸಲು ಒತ್ತಾಯಿಸಿದರು. ಈ ವೇಳೆ ಗರಂ ಆದ ತಹಸೀಲ್ದಾರ್ ಎಚ್. ವಿಶ್ವನಾಥರವರು ರಾಜ್ಯ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷರನ್ನು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದರು.
ಕೊವೀಡ್ ನಿಯಮ ಇದ್ದರೂ ತಹಸೀಲ್ದಾರ್ ಕಚೇರಿ ಎದುರು ಆಗಮಿಸಿ ಭಿತ್ತಿಪತ್ರ ಪ್ರದರ್ಶಿಸಿ ಮನವಿ ಪತ್ರ ಪಡೆಯಲು ಕೆಎಸ್‍ಆರ್‍ಟಿಸಿ ಡಿಸಿ ಅವರನ್ನು ಕರೆಸಿ ಎಂದು ಪಟ್ಟು ಹಿಡಿದಿದ್ದ ಸರಿಯೆ ?, ಹೋರಾಟಗಾರರು, ಇವರನ್ನು ಕಕೊರ್ಂಡು ಹೋಗಿ ಸ್ಟೇಷನ್ ಒಳಗೆ ಕೂಡಿಸಿ! ಎಂದು ಪೊಲೀಸರಿಗೆ ತಹಸೀಲ್ದಾರ್ ಸೂಚಿಸಿದರು. ಬಳಿಕ ಹೋರಾಟಗಾರರು ತಹಶೀಲ್ದಾರ್ ಕಚೇರಿಯಿಂದ ಕಾಲ್ಕತ್ತಿದ್ದರೂ,
ಅಮ್ಮಾ ತಾಯಿ ಕೈ ಮುಗಿತಿನಿ ಮನೆಗೆ ಹೋಗಿ ಅಂತ ಸಾರಿಗೆ ನೌಕರರ ಕುಟುಂಬ ಸದಸ್ಯರಿಗೆ ತಹಸೀಲ್ದಾರ್ ಎಚ್. ವಿಶ್ವನಾಥ ಮನವಿ ಮಾಡಿಕೊಂಡರು.