ಸಾರಿಗೆ ನಿಯಮ ಉಲ್ಲಂಘನೆ ಅಕ್ರಮ ಸಾಗಾಣಿಕೆಗೆ ಬ್ರೇಕ್ ಹಾಕಿ

ಬಳ್ಳಾರಿ, ನ.19 ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡಿ ಟ್ರ್ಯಾಕ್ಟರ್ ಗಳಲ್ಲಿ ನಡೆಯುತ್ತಿರುವ ಅಕ್ಕಿ, ಭತ್ತ, ಹೊಟ್ಟಿನ ಸಾಗಾಣಿಕೆಗೆ ಬ್ರೇಕ್ ಹಾಕಬೇಕೆಂದು ಲಾರಿ ಮಾಲೀಕರು, ಆರ್.ಟಿ.ಓ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ನಿಯಮಿತವಾಗಿ ಸಾರಿಗೆ ನಿಯಮದಂತೆ ಲಾರಿಗಳಲ್ಲಿ ಅಕ್ಕಿ, ಭತ್ತ, ಹೊಟ್ಟನ್ನು ಸಾಗಾಣೆ ಮಾಡುತ್ತಿದೆ. ಸಿರುಗುಪ್ಪದಿಂದ ಗಂಗಾವತಿ, ಸಿಂಧನೂರು, ಮಾನ್ವಿ, ರಾಯಚೂರು, ಕಾರಟಗಿ ಮೊದಲಾದಕಡೆಗೆ ಸಾಗಾಟ ಲಾರಿಗಳಲ್ಲಿಯೇ ನಡೆದುಕೊಂಡು ಬಂದಿದೆ. ಈ ಮೊದಲು ಓವರ್ ಲೋಡ್ ಹಾಕಿದಾಗ ಕಡಿಮೆ ಬೆಲೆಗೆ ಸಾಗಾಟ ಮಾಡುತ್ತಿತ್ತು. ಆದರೆ 2018ರಿಂದ ಓವರ್ ಲೋಡ್ ಹಾಕಿ, ಆರ್.ಟಿ.ಓ, ಪೊಲೀಸ್ ಮಾಮೂಲು ನೀಡಿ ವಿನಾಕಾರಣ ಕೇಸು ಹಾಕಿಸಿಕೊಳ್ಳುವುದು ಬೇಡ ಎಂದು ಸಾರಿಗೆ ಇಲಾಖೆ ನಿಗಧಿಪಡಿಸಿದಂತೆ ಲೋಡ್ ಮಾಡುತ್ತಿದೆ. ಇದರಿಂದ ಸಾಗಾಣಿಕೆ ವೆಚ್ಚ ಹೆಚ್ಚಿದೆ.
ಅದಕ್ಕಾಗಿ ರೈಸ್ ಮಿಲ್ ಮಾಲೀಕರು ಟ್ರ್ಯಾಕ್ಟರ್ ಗಳಲ್ಲಿ ಸಾಗಾಟಕ್ಕೆ ಮುಂದಾದರು. ಕೃಷಿಗೆಂದು ಲೈಸೆನ್ಸ್ ಪಡೆದ ಟ್ರ್ಯಾಕ್ಟರ್ ಗಳ ಸಿಂಗಲ್ ಟೈಯರ್ ಟ್ರಾಲಿಯಲ್ಲಿ ಸಾಗಾಟ ಆರಂಭಗೊಂಡಿತು. ಆದರೆ ಅದೂ ಸಹ ಗಿಟ್ ಪಟ್ ಆಗದಿದ್ದಾಗ ಟ್ರ್ಯಾಕ್ಟರ್ ಮಾಲೀಕರು ಸಾರಿಗೆ ನಿಯಮ ಉಲ್ಲಂಘಿಸಿ ಕೃಷಿ ಬಳಕೆಗೆಂದು ತೆರಿಗೆ ಕಟ್ಟಿ ಟ್ರಾಲಿಗಳಿಗೆ ಲೈಸನ್ಸ್ ಪಡೆದು ಈಗ ಅವುಗಳಿಗೆ ಡಬಲ್ ಆಕ್ಸಿಲ್ ಮಾಡಿ ಓವರ್ ಲೋಡ್ ಮಾಡಿ ಕಮರ್ಷಿಯಲ್ ರೀತಿಯಲ್ಲಿ, ಲೋಡಿಂಗ್ ಮಾಡುತ್ತಿದ್ದಾರೆ. ಇದು ಅಕ್ರಮ ಎಂದು ಗೊತ್ತಿದ್ದರು. ಆರ್.ಟಿ.ಓ ಅಧಿಕಾರಿಗಳು ತಡೆಯುತ್ತಿಲ್ಲ. ಇದಕ್ಕೆ ಕಾರಣ ಅವರ ಕೈ ಬೆಚ್ಚಗೆ ಆಗುತ್ತಿರುವುದು. ಅದೇ ರೀತಿ ಪೊಲೀಸರು ಸಹ ಮೌನವಹಿಸಿದ್ದಾರೆ.
ಇದರಿಂದಾಗಿ ಈಗ ಒಂದು ನೂರಕ್ಕೂ ಹೆಚ್ಚು ಇಂತಹ ಟ್ರಾಲಿಗಳ ಟ್ರ್ಯಾಕ್ಟರ್ ಗಳಿಂದ ಸಾಗಾಟ ನಡೆದಿರುವುದು ನಗರದಲ್ಲಿರುವ 150ಕ್ಕೂ ಹೆಚ್ಚು ಮಾಲೀಕರ ಆದಾಯಕ್ಕೆ ಕುತ್ತು ಬಂದಿದೆ. ಅದಕ್ಕಾಗಿ ಸಿರುಗುಪ್ಪ ಲಾರೀ ಮಾಲೀಕರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಶೇಕ್ಷಾವಲಿ, ಎಱ್ರಿಸ್ವಾಮಿ ಅವರು ಇಂದು ಬಳ್ಳಾರಿ ಜಿಲ್ಲಾ ಲಾರೀ ಮಾಲೀಕರ ಸಂಘದ ಅಧ್ಯಕ್ಷ ಮುನ್ನ, ಕಾರ್ಯದರ್ಶಿ ಬಸವರಾಜ್, ಉಪಾಧ್ಯಕ್ಷ ಪೆದ್ದಣ್ಣ, ನಾರಾಯಣಸ್ವಾಮಿ ಅವರೊಂದಿಗೆ ಆರ್.ಟಿ.ಓ ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ರೀತಿ ಅಕ್ರಮ, ಸಾರಿಗೆ ನಿಯಮ ಉಲ್ಲಂಘನೆ ಮಾಡಿ ನಡೆಯುವ ಸಾಗಾಟ ತಡೆಯುವಂತೆ ಮನವಿ ಸಲ್ಲಿಸಿದ್ದಾರೆ.