ಸಾರಿಗೆ ನಿಗಮಗಳಿಗೆ ಆರ್ಥಿಕಬೆಂಬಲ ನೀಡಿ: ಅನಂತ ಸುಬ್ಬರಾವ್

ಕಲಬುರಗಿ ಜ 11: ಸಾರ್ವಜನಿಕ ಸಾರಿಗೆಯನ್ನು ವ್ಯಾಪಾರದ ದೃಷ್ಠಿಯಿಂದ ನೋಡದೇ,ಸರ್ಕಾರಗಳು ನಾಗರಿಕರಿಗೆ ಕೊಡುವ ಸೌಲಭ್ಯಗಳೆಂದು ಪರಿಗಣಿಸಿ ಸಾರಿಗೆ ನಿಗಮಗಳಿಗೆ ಆರ್ಥಿಕ ಬೆಂಬಲ ನೀಡುವಂತೆ ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ರಾಜ್ಯಾಧ್ಯಕ್ಷ ಎಚ್.ವಿ ಅನಂತ ಸುಬ್ಬರಾವ್ ಅವರು ಆಗ್ರಹಿಸಿದರು.
ನಗರದಲ್ಲಿಂದು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್ಥಿಕವಾಗಿ ನೆಲ ಕಚ್ಚಿದ ನಾಲ್ಕೂ ನಿಗಮಗಳನ್ನು ಒಗ್ಗೂಡಿಸಿ, ಒಂದೇ ನಿಗಮ ಮಾಡಬೇಕು ಎಂದರು.
ಪ್ರತಿವರ್ಷ ಬಜೆಟ್ ನಲ್ಲಿ ಸಾರಿಗೆ ನಿಗಮಗಳಿಗೆ 1000 ಕೋಟಿ ರೂ. ಮೀಸಲಿಡಬೇಕು.ಸರ್ಕಾರ ಸಾರಿಗೆ ನಿಗಮಗಳ ವೇತನವನ್ನು ಸಂಪೂರ್ಣವಾಗಿ ನೀಡಬೇಕು. ಸಾರಿಗೆ ನಿಗಮಗಳ ಮೇಲೆ ಹೊರೆಸಿರುವ ಮೋಟಾರು ವಾಹನ ತೆರಿಗೆಯನ್ನು ರದ್ದು ಮಾಡಬೇಕು ಎಂದರು.
3000 ಕೋಟಿ ರೂ ಬಾಕಿ:
ವಿದ್ಯಾರ್ಥಿಗಳ ಪಾಸ್ ಮತ್ತಿತರ ಸಾಮಾಜಿಕ ಹೊಣೆಗಾರಿಕೆಗೆ ಸರ್ಕಾರ ಬಾಕಿ ಉಳಿಸಿಕೊಂಡಿರುವ ಸುಮಾರು 3 ಸಾವಿರ ಕೋಟಿ ರೂ.ಹಣವನ್ನು ಸಾರಿಗೆ ನಿಗಮಗಳಿಗೆ ಕೂಡಲೇ ನೀಡಬೇಕು. ಕೋವಿಡ್ ಕಾರಣದಿಂದ ಮರಣ ಹೊಂದಿದ ಸುಮಾರು 50 ಜನ ಸಾರಿಗೆ ನೌಕರರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸಾರಿಗೆ ನಿಗಮಗಳಿಗೆ ಹೆದ್ದಾರಿ ಸುಂಕದಿಂದ ವಿನಾಯತಿ ನೀಡಬೇಕು.ಸಾರಿಗೆ ನಿಗಮಗಳ ಇಂಧನದ ಮೇಲೆ ಹಾಕಿರುವ ಸುಂಕವನ್ನು ಶೇ 50 ಭಾಗ ಕಡಿಮೆಗೊಳಿಸಬೇಕು ಎಂದು ಫೆಡರೇಷನ್ ಮುಂದಿಡುವ ಈ ಎಲ್ಲ ಬೇಡಿಕೆಗಳನ್ನು ಆಡಳಿತ ವರ್ಗ ಇತ್ಯರ್ಥ ಪಡಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ವಿಜಯಭಾಸ್ಕರ್ ಡಿ ಎ, ಎಚ್.ಎಸ್ ಪದಕಿ, ಸಿದ್ದಪ್ಪ ಪಾಲ್ಕಿ, ಪ್ರಭುದೇವ ಯಳಸಂಗಿ, ಹಣಮಂತರಾಯ ಅಟ್ಟೂರ ಉಪಸ್ಥಿತರಿದ್ದರು