
ಬೆಂಗಳೂರು, ನ. ೬- ರಾಜ್ಯದಲ್ಲಿ ಸಾರಿಗೆ ಬಸ್‌ಗಳ ಪ್ರಯಾಣ ದರವನ್ನು ಏರಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ೪ ಸಾರಿಗೆ ನಿಗಮಗಳ ಟಿಕೆಟ್ ದರ ಏರಿಕೆ ಕುರಿತಂತೆ ನಿರ್ಧರಿಸಲು ನಿಯಂತ್ರಣ ಸಮಿತಿ ರಚಿಸುವ ಸಂಬಂಧ ೪ ನಿಗಮಗಳು ಇತ್ತೀಚೆಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ ಇನ್ನು ಸಮಿತಿ ರಚನೆಯಾಗಿಲ್ಲ. ಹಾಗೆಯೇ ದರ ಏರಿಕೆ ಪ್ರಸ್ತಾವವೂ ಇಲ್ಲ ಎಂದರು.
ಬಿಜೆಪಿ ಸರ್ಕಾರ ಸಾರಿಗೆ ಸಂಸ್ಥೆಯ ಸುಧಾರಣೆಗೆ ನಿವೃತ್ತ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಏಕವ್ಯಕ್ತಿ ಸಮಿತಿ ರಚನೆ ಮಾಡಿತ್ತು. ಆ ಸಮಿತಿ ದರ ಪರಿಷ್ಕರಣೆ ಸಂಬಂಧ ಸಾರಿಗೆ ಸಂಸ್ಥೆ ನಿಯಂತ್ರಣ ಸಮಿತಿಯನ್ನು ರಚಿಸಬೇಕು ಎಂದು ಶಿಫಾರಸ್ಸು ಮಾಡಿದೆ. ಆರ್ಥಿಕ ಇಲಾಖೆಯೂ ಅದನ್ನೆ ಹೇಳಿದೆ. ನಿಯಂತ್ರಣ ಸಮಿತಿ ಸ್ಥಾಪನೆಯಾದ ನಂತರ ಡೀಸೆಲ್ ಬೆಲೆ, ವಾಹನಗಳ ಬಿಡಿ ಭಾಗಗಳ ಬೆಲೆ ಏರಿಕೆ, ಉದ್ಯೋಗಿಗಳ ಸಂಬಳ, ಕಾರ್ಯಾಚರಣೆಯ ವೆಚ್ಚ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಬಗ್ಗೆ ತೀರ್ಮಾನಿಸುತ್ತದೆ. ತಕ್ಷಣಕ್ಕೆ ದರ ಏರಿಸುವ ಪ್ರಸ್ತಾಪ ಇಲ್ಲ ಎಂದರು.