ಸಾರಿಗೆ ಘಟಕಗಳಲ್ಲಿ ವಿಶ್ರಾಂತಿ ಗೃಹ ನಿರ್ಮಾಣ: ಸಚಿವ ಸವದಿ

ಬೆಳಗಾವಿ, ಜ 9- ಚಾಲಕರು ಮತ್ತು ನಿರ್ವಾಹಕರ ವಿಶ್ರಾಂತಿಗೆ ಹಂತ ಹಂತವಾಗಿ ಎಲ್ಲ ಸಾರಿಗೆ ಘಟಕಗಳಲ್ಲಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಹೇಳಿದರು.
ವಾಕರಸಾಸಂಸ್ಥೆ ಬೆಳಗಾವಿ ವಿಭಾಗದ ಘಟಕ 3 ರಲ್ಲಿ ನೂತನವಾಗಿ ನಿರ್ಮಿಸಿದ ಮಹಿಳಾ ಮತ್ತು ಪುರಷರ ಸಿಬ್ಬಂದಿಗಳ ವಿಶ್ರಾಂತಿ ಗೃಹಗಳು ಹಾಗೂ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ತವ್ಯದ ಮೇರೆಗೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಚಾಲಕರು ಹಾಗೂ ನಿರ್ವಾಹಕರುಗಳಿಗೆ ವಸತಿಗೆ ಬಹಳ ತೊಂದರೆ ಆಗುತ್ತಿದ್ದು, ಇದನ್ನು ಗಮನಿಸಿ ಮಹಿಳಾ ಹಾಗೂ ಪುರುಷರಿಗಾಗಿ ಪ್ರತ್ಯೇಕ ಎರಡು ವಿಶ್ರಾಂತಿ ಗೃಹ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಬೇಡಿಕೆ ಈಡೇರಿಕೆ ಭರವಸೆ:
ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳ ಒಟ್ಟು 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಕೊಡಲಾಗಿದೆ. ಆರನೇ ವೇತನ ಆಯೋಗಕ್ಕಾಗಿ ಸಮಿತಿಯನ್ನು ರಚಿಸಲಾಗಿದ್ದು, ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಮಿತಿಯು ಕಾರ್ಯಾರಂಭಿಸಿದೆ ಎಂದರು.
ಶಾಲಾ -ಕಾಲೇಜುಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಕಾರ್ಯ ಪ್ರಾರಂಭವಾಗಿದೆ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಯಾವುದೇ ರೀತಿ ತೊಂದರೆ ಆಗದಂತೆ ಅವರನ್ನು ಶಾಲಾ -ಕಾಲೇಜುಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಕೋವಿಡ್ ಹಿನ್ನಲೆಯಲ್ಲಿ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿಯು ವಿಳಂಬವಾಗಿದ್ದು, ಸಂಬಂಧಪಟ್ಟ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸುಗಳನ್ನು ನೀಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಏಪ್ರಿಲ್ ಅಂತ್ಯದೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಶಾಸಕ ಅನಿಲ್ ಬೆನಕೆ, ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್.ಮುಂಜಿ ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.