ಸಾರಿಗೆ ಕಾರ್ಮಿಕರ ಮೇಲಿನ ದಮನವನ್ನು ನಿಲ್ಲಿಸಿ

ದಾವಣಗೆರೆ. ಏ.೨೦;ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಕಾರ್ಮಿಕರು ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಆಡಳಿತ ವರ್ಗ ಮತ್ತು ರಾಜ್ಯ ಬಿಜೆಪಿ ಸರ್ಕಾರವು ತೀವ್ರವಾದ ದಾಳಿಗಳನ್ನು ನಡೆಸುತ್ತಿದ್ದು ಸಹಸ್ರಾರು ಕಾರ್ಮಿಕರನ್ನು ವಜಾ, ಅಮಾನತ್ತು ಮತ್ತು ವರ್ಗಾವಣೆಗಳಂತಹ ಕ್ರಮಗಳಿಂದ ದಮನ ಮಾಡುತ್ತಿದೆ. ಮುಷ್ಕರದ ಸಂದರ್ಭದಲ್ಲಿ ಇಂತಹ ದ್ವೇಷಪೂರಿತವಾದ ಕ್ರಮಗಳು ಸಮಸ್ಯೆಯನ್ನು ಬಗೆಹರಿಸುವ ಬದಲಿಗೆ ಮತ್ತಷ್ಟು ಬಿಗಡಾಯಿಸುತ್ತವೆ ಎಂಬುದನ್ನು ಸರ್ಕಾರ ಮರೆತ ಹಾಗೆ ಕಾಣುತ್ತದೆ. ಸಮಸ್ಯೆಗಳ ಬಗ್ಗೆ ಮಾತುಕತೆ ಮಾಡಿ ಪರಿಹಾರ ಮಾಡಲು ಸಾಧ್ಯವಿರುವ ದಾರಿಗಳನ್ನು ಹುಡುಕುವ ಬದಲು ಕಾರ್ಮಿಕರನ್ನು ಬಲಿಪಶುಗಳನ್ನಾಗಿ ಮಾಡುವ ಕ್ರಮಗಳನ್ನು ಸಿ.ಐ.ಟಿ.ಯು. ತೀವ್ರವಾಗಿ ವಿರೋಧಿಸುತ್ತದೆ ಎಂದು ಸಿಐಟಿಯು ಜಿಲ್ಲಾ ಸಂಚಾಲಕ ಆನಂದರಾಜು ಕೆ.ಹೆಚ್ ಹೇಳಿದ್ದಾರೆ. ಸಾರಿಗೆ ಕಾರ್ಮಿಕರ ಮೇಲಿನ ದಮನ ಮತ್ತು ದಾಳಿಗಳನ್ನು ಬಿಟ್ಟು ಸೌಹಾರ್ದಯುತವಾಗಿ ಸಮಸ್ಯೆಯನ್ನು ಸರ್ಕಾರ ಮತ್ತು ಆಡಳಿತ ವರ್ಗ ಇತ್ಯರ್ಥ ಮಾಡಬೇಕು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಕಾರ್ಮಿಕರು ಯಾವುದೇ ಕಠಿಣ ಸಂದರ್ಭಗಳಲ್ಲೂ ರಾಜ್ಯದ ಕೋಟ್ಯಾಂತರ ಜನರಿಗೆ ಸಾರಿಗೆ ಸೇವೆಗಳನ್ನು ಒದಗಿಸುತ್ತಿದ್ದಾರೆ. ಇಡೀ ದೇಶದಲ್ಲೇ ಅತ್ಯಂತ ಪ್ರಬಲವಾದ ಸಾರ್ವಜನಿಕ ಸಾರಿಗೆ ಜಾಲವನ್ನು ಹೊಂದಿರುವ ನಮ್ಮ ಸಾರಿಗೆ ನಿಗಮಗಳ ಕಾರ್ಮಿಕರ ಒಟ್ಟಾರೆ ಶ್ರಮದಿಂದ ನೂರಾರು ಪ್ರಶಸ್ತಿಗಳನ್ನು ಗಳಿಸಲು ಸಾಧ್ಯವಾಗಿದೆ.  ಈಗಾಗಲೇ ವೇತನ ತಾರತಮ್ಯ ಮತ್ತು ವಿಪರೀತ ಕಿರುಕುಳಗಳಿಂದ ಬೇಸತ್ತಿರುವ ಕಾರ್ಮಿಕರ ಮೇಲೆ ಮತ್ತಷ್ಟು ದಮನ ಮತ್ತು ಕಿರುಕುಳಗಳನ್ನು ನಡೆಸುವುದು ಪರಿಸ್ಥಿತಿಯನ್ನು ಮತ್ತಷ್ಟು ಹಾಳು ಮಾಡುತ್ತದೆ ಎಂದಿದ್ದಾರೆ.