ಸಾರಿಗೆ ಇಲಾಖೆಯಿಂದ ಅಪಘಾತ ಪರಿಹಾರ ವಿತರಣೆ

ಬೆಂಗಳೂರು.ಫೆ೧೪:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನೌಕರರ ಅವಲಂಭಿತರಿಗೆ ಅಪಘಾತ ಪರಿಹಾರ ವಿಮೆ ರೂ.೧ ಕೋಟಿ ಹಾಗೂ ಇತರೆ ಕಾರಣಗಳಿಂದ ಮೃತಪಟ್ಟ (ಹೃದಯಾಘಾತ/ ಕ್ಯಾನ್ಸರ್ , ಸ್ಟ್ರೋಕ್) ೧೬ ನೌಕರರ ಕುಟುಂಬದವರಿಗೆ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಹಣ ರೂ.೧೦ ಲಕ್ಷವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿತರಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಸಿಬ್ಬಂದಿಗಳ ಅವಲಂಭಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟ ಅಥವಾ ಅಂಗನ್ಯೂನತೆಗೆ ಒಳಗಾದಲ್ಲಿ ರೂ.೧ ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಯೋಜನೆ ಜಾರಿ ನಂತರದಲ್ಲಿ ೧೭ ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.
ಇದುವರೆವಿಗೂ ೧೨ ಜನ ನೌಕರರ ಕುಟುಂಬದವರಿಗೆ ತಲಾ ರೂ. ೧ ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ. ರಾಜೇಶ್ ಡಿ.ಸಿ, ಚಾಲಕ-ಕಂ-ನಿರ್ವಾಹಕ, ಬಿಲ್ಲೆ ಸಂಖ್ಯೆ: ೧೪೪೭, ಅರಕಲಗೂಡು ಘಟಕ, ಹಾಸನ ವಿಭಾಗ, ರವರು ದಿನಾಂಕ: ೨೯.೦೭.೨೦೨೩ ರಂದು ಮೃತಪಟ್ಟಿರುತ್ತಾರೆ. ಮೃತರ ಅವಲಂಭಿತರಿಗೆ ರೂ.೧ ಕೋಟಿಗಳ ಅಪಘಾತ ಪರಿಹಾರ ವಿಮಾ ಜೊತೆಗೆ, ಉಪಧನ, ಭವಿಷ್ಯ ನಿಧಿ, ನೌಕರರ ಕುಟುಂಬ ಕಲ್ಯಾಣ ಯೋಜನೆ, ಡಿಆರ್ಬಿಎಫ್ ಹಾಗೂ ಗಂಪು ವಿಮಾ ಯೋಜನೆಯಿಂದ ರೂ.೧೪,೧೯,೯೮೦/- ಪರಿಹಾರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿ.ಅನ್ಬುಕುಮಾರ್, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಡಾ.ನಂದಿನಿದೇವಿ. ಭಾ.ಆ.ಸೇ, ನಿರ್ದೇಶಕರು (ಸಿಬ್ಬಂದಿ ಮಾತ್ತು ಜಾಗೃತ), ಕಾರ್ಮಿಕ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.