ಸಾರಿಗೆ ಇಲಾಖೆಗೆ ೫ ಸಾವಿರ ಸಿಬ್ಬಂದಿ ನೇಮಕ

ಬೆಂಗಳೂರು, ಜೂ.೩೦- ರಾಜ್ಯ ಸಾರಿಗೆ ಇಲಾಖೆಯನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವ ಸಚಿವ ರಾಮಲಿಂಗಾರೆಡ್ಡಿ ಅವರು, ನಾಲ್ಕು ನಿಗಮಗಳಲ್ಲೂ ೫ ಸಾವಿರಕ್ಕೂ ಅಧಿಕ ಸಿಬ್ಬಂದಿಗಳ ನೇಮಕ, ಹೊಸ ಬಸ್ ಖರೀದಿಗೆ ಮುಂದಾಗಿದ್ದಾರೆ.ನಗರದಲ್ಲಿಂದು ಬಿಎಂಟಿಸಿ ಕೇಂದ್ರ ಕಚೇರಿ ಯ ಮುಂಭಾಗದಲ್ಲಿ ನೂತನ ಬೊಲೆರೋ ವಾಹನಗಳು ಹಾಗೂ ತರಬೇತಿ ಬಸ್ಸಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ನಿಗಮದ ನೌಕರರು ಕ್ಯಾನ್ಸರ್ ಕಾಯಿಲೆಗೆ ವೈದ್ಯರ ಸಲಹೆ ಮೇರೆಗೆ ಕಿಮೋ ಅಥವಾ ರೇಡಿಯೋ ತೆರಪಿಗೆ ಒಳವಟ್ನಲ್ಲಿ ಸರ್ಕಾರದಲ್ಲಿ ಜಾರಿಯಲ್ಲಿರುವಂತೆ ಚಿಕಿತ್ಸೆಯ ಅವಧಿಯಲ್ಲಿ ಗರಿನ ಆರು ತಿಂಗಳ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗುವುದು ಎಂದರು.೩,೭೪೫ ಚಾಲನಾ ಸಿಬ್ಬಂದಿಗಳು ಹಾಗೂ ೭೨೬ ತಾಂತ್ರಿಕ ಸಿಬ್ಬಂದಿಗಳ ಈಗಾಗಲೇ ಕರೆಯಲಾಗಿರುವ ಜಾಹೀರಾತು ಪ್ರಕ್ರಿಯೆಯನ್ನು ಮುಂದುವರೆಸಿ ನೇಮಕಾತಿ ಮಾಡಿಕೊಳ್ಳಲು ಹಾಗೂ ಹೊಸದಾಗಿ ೧೪೩೩ ಚಾಲನಾ ಸಿಬ್ಬಂದಿಗಳ ಮತ್ತು ೨೭೩೮ ತಾಂತ್ರಿಕ ಸಿಬ್ಬಂದಿಗಳನ್ನು ನೇರ ನೇಮಕಾತಿ ಮೂಲಕ ತುಂಬಲು ಸರ್ಕಾರದಿಂದ ಅನುಮತಿ ಪಡೆಯಲು ತೀರ್ಮಾನಿಸಲಾಗಿದೆ.ನಿಗಮದ ಖಾಲಿ ನಿವೇಶನದಲ್ಲಿ ವಾಣಿಜ್ಯ ಆದಾಯ ಗಳಿಸುವ ಉದ್ದೇಶದಿಂದ ಪೆಟ್ರೋಲ್ ಬಂಕ್ ತೆರೆಯಲು ಟೆಂಡರ್ ನಲ್ಲಿ ಆಯ್ಕೆಯಾಗಿರುವ ಭಾರತ್ ಪೆಟ್ರೋಲಿಯಂ ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ರವರಿಗೆ ೧೦ ಬಿಟ್ ಲೇಟ್ ಗಳಿಗೆ ಒಪ್ಪಿಗೆ ನೀಡಲಾಗಿದೆ ಹಾಗೂ ೩೬ ಸ್ಥಳಗಳಿಗೆ ಬಂಕ್ ತೆರೆಯಲು ಮರು ಟೆಂಡರ್ ಮೂಲಕ ಆಯ್ಕೆ ಮಾಡಲು ಅನುಮತಿಸಲಾಗಿದೆ.ನಿಗಮದ ವಾಣಿಜ್ಯ ಆದಾಯವನ್ನು ಹೆಚ್ಚಿಸುವ ಸಲುವಾಗಿ ಜಾರಿಯಲ್ಲಿರುವ “ನಮ್ಮ ಕಾರ್ಗೋ ” ಲಾಜಿಸ್ಟಿಕ್ ಯೋಜನೆಗೆ ಆರು ಟನ್ ಸಾಮರ್ಥ್ಯದ ೨೦ ಪೂರ್ಣ ನಿರ್ಮಿತ ಟ್ರಕ್ಕುಗಳನ್ನು ಖರೀದಿಸಲಾಗುವುದು. ಇದರಿಂದಾಗಿ ಪಾರ್ಸೆಲ್ ಮತ್ತು ಕೊರಿಯರ್ ಸಾಗಾಣಿಕೆಯ ಜೊತೆಗೆ ಈ ವಾಹನಗಳನ್ನು ನಿಗಮದ ಘಟಕ ಹಾಗೂ ವಿಭಾಗೀಯ ಕಾರ್ಯಗಾರಗಳಲ್ಲಿ ಬಳಸಬಹುದಾಗಿರುತ್ತದೆ ಎಂದರು.ಪ್ರತಿಷ್ಠಿತ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹಾಗೂ ಖಾಸಗಿ ಪುವರ್ತಕರೊಂದಿಗೆ ಪೈಪೋಟಿ ನೀಡುವ ಸಲುವಾಗಿ ೪೪ ಹವಾನಿಯಂತ್ರಣ ರಹಿತ (ನಾನ್ ಎ.ಸಿ) ಹಾಗೂ ೪ ಹವಾ ನಿಯಂತ್ರಿತ (ಎ.ಸಿ) ಸೀಪರ್ ವಾಹನಗಳನ್ನು ಖರೀದಿಸಲಾಗುವುದು ಎಂದು ಹೇಳಿದರು.ಇನ್ನೂ, ಬಿಎಂಟಿಸಿಗೆ ೨೦೦೦ ನಿರ್ವಾಹಕ ಹಾಗೂ ೧೦೦೦ ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಮಾಡಲು ಸರ್ಕಾರದ ಅನುಮತಿ ಪಡೆಯಲಾಗುವುದು.ಹಾಗೇ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ೪೫೦ ವಿದ್ಯುತ್ ಚಾಲಿತ ವಾಹನಗಳನ್ನು ಜಿ.ಸಿ.ಸಿ. ಆಧಾರದ ಮೇಲೆ ಪಡೆಯಲು ಟೆಂಡರ್ ಆಹ್ವಾನಿಸಲು ಅನುಮತಿ ಪಡೆಯುವುದು. ೨೦ ಹವಾನಿಯಂತ್ರಣ ರಹಿತ (ನಾನ್ ಎ.ಸಿ) ಹಾಗೂ ೪ ಹವಾ ನಿಯಂತ್ರಿತ (ಎ.ಸಿ) ಸ್ಟೀಪರ್ ವಾಹನಗಳನ್ನು ಖರೀದಿಸಲಾಗುವುದು ಎಂದರು.