ಸಾಯಿ ಬಾಬಾ ೯೫ನೇ ಜನ್ಮದಿನೋತ್ಸವ, ಅತಿರುದ್ರ ಮಹಾಯಜ್ಞ

ಚಿಕ್ಕಬಳ್ಳಾಪುರ,ನ೧೩:ಭಗವಾನ್ ಶ್ರೀ ಸತ್ಯಸಾಯಿ ಬಾಬಾ ರವರ ೯೫ ನೇ ಜನ್ಮ ದಿನೋತ್ಸವವನ್ನು ಸದ್ಗುರು ಶ್ರೀ ಮಧುಸೂದನ್ ಸಾಯಿ ಯವರ ದಿವ್ಯ ಸನ್ನಿಧಿಯಲ್ಲಿ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಇದೇ ತಿಂಗಳ ೧೩ ರಿಂದ ೨೩ ರವರೆಗೆ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುವುದುಎಂದು ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ಮಾಧ್ಯಮ ಪ್ರಮುಖರು ತಿಳಿಸಿದರು .
ಜನ್ಮ ದಿನೋತ್ಸವದ ಅಂಗವಾಗಿ ’ ಅತಿರುದ್ರ ಮಹಾಯಜ್ಞ ’ ವನ್ನು ಆಯೋಜಿಸಲಾಗಿದೆ. ಅತಿರುದ್ರ ಮಹಾಯಜ್ಞವು ಅತ್ಯಂತ ಪವಿತ್ರವೂ, ಶಕ್ತಿಶಾಲಿಯೂ ಆದುದು. ಇದು ಪರಶಿವನನ್ನು ಪೂಜಿಸುವ, ಸ್ತುತಿಸುವ, ಮತ್ತು ಜಗತ್ತನ್ನು ಆವರಿಸಿರುವ ವಿಶ್ವತೋಮುಖ ಪ್ರಜ್ಞೆಯನ್ನು ಆರಾಧಿಸುವ ವಿಧಾನವಾಗಿದೆ ಎಂದರು.
ಪರಶಿವನ ಕರುಣೆ, ಪ್ರೇಮಗಳು ಎಲ್ಲರಿಗೂ ಅಭಯವನ್ನು ನೀಡಲಿ, ಲೋಕದಲ್ಲಿ ತಾಂಡವವಾಡುತ್ತಿರುವ ದುಷ್ಟಶಕ್ತಿಗಳನ್ನು ದಮನಿಸಿ ಲೋಕ ಕಲ್ಯಾಣ ಹಾಗೂ ವಿಶ್ವ ಶಾಂತಿಯನ್ನು ಉಂಟುಮಾಡಲಿ ಎಂಬ ಪವಿತ್ರ ಉದ್ದೇಶದಿಂದ ಈ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಮುಂಜಾನೆ ಪ್ರಾರಂಭವಾಗುವ ಯಜ್ಞವು ಭಗವಾನ್ ಬಾಬಾರವರ ೯೫ನೇ ಜನ್ಮ ದಿನವಾದ ನವೆಂಬರ್ ೨೩ ರಂದು ಪೂರ್ಣಾಹುತಿಯೊಂದಿಗೆ ಸಮಾಪ್ತವಾಗುತ್ತದ ಎಂದು ವಿವರಿಸಿದರು
ಯಜ್ಞವೇದಿಕೆಯು ಮನಮೋಹಕವಾಗಿ ಮತ್ತು ಸರ್ವಾಲಂಕೃತವಾಗಿ ಸಜ್ಜುಗೊಂಡಿದೆ. ಸೆಣಬಿನ ಬಟ್ಟೆಯ ಮೇಲೆ ವೈವಿಧ್ಯಮಯ ಚಿತ್ರಗಳನ್ನು ಬಿಡಿಸಲಾಗಿದೆ. ಶಿವನಿಗೆ ಸಂಬಂಧಿಸಿದ ದೇವಾಲಯಗಳ ಚಿತ್ರಗಳು ವೇದಿಕೆಯ ಸುತ್ತಲೂ ಕಂಗೊಳಿಸುತ್ತಿವೆ. ಶಿವನ ಹೆಸರುಗಳುಳ್ಳ ೧೧ ಹೋಮ ಕುಂಡಗಳನ್ನು ನಿರ್ಮಿಸಲಾಗಿದ್ದು, ಪ್ರಮುಖ ಹೋಮ ಕುಂಡಕ್ಕೆ ’ಮಹಾದೇವ’ ಎಂದು ಹೆಸರಿಸಲಾಗಿದೆ ಎಂದರು
ಉಳಿದ ಹತ್ತು ಹೋಮ ಕುಂಡಗಳಿಗೆ ಕ್ರಮವಾಗಿ ದೇವದೇವ, ಈಶ್ವರ, ವಿಜಯ, ಆದಿತ್ಯಾತ್ಮಕ, ಶ್ರೀರುದ್ರ, ಭೀಮ, ಶಿವ, ರುದ್ರ, ನೀಲಲೋಹಿತ, ಭಾವೋದ್ಭವ, ಶಂಕರ ಎಂದು ಹೆಸರಿಸಲಾಗಿದೆ.
ಕೈಲಾಸವೇ ಧರೆಗಿಳಿದು ಬಂದಂತೆ ಶಿವನ ಭವ್ಯವಾದ ವಿಗ್ರಹದೊಂದಿಗೆ ಕೈಲಾಸ ಪರ್ವತದ ಪ್ರತಿಕೃತಿಯನ್ನು ಸೃಷ್ಠಿಸಿ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಅತಿರುದ್ರ ಮಹಾಯಜ್ಞಕ್ಕೆ ಸಜ್ಜುಗೊಂಡಿದೆ. ಭಾರತದ ಪ್ರಮುಖ ನದಿಗಳ ನೀರನ್ನು ಸಂಗ್ರಹಿಸಲಾಗಿದೆ.
ಶೃಂಗೇರಿಯ ಶ್ರೀ ಯಜ್ಞಭಟ್ ಮತ್ತು ಶ್ರೀ ಗಣೇಶ ಮೂರ್ತಿ ಭಟ್ ರವರ ನೇತೃತ್ವದಲ್ಲಿ ನಡೆಯುವ ಈ ಅತಿರುದ್ರ ಮಹಾಯಜ್ಞದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ೧೩೫ ವೈದಿಕ ಋತ್ವಿಕರು ಭಾಗವಹಿಸಲಿದ್ದಾರೆ. ಈ ಯಜ್ಞದಲ್ಲಿ ೧೧ ಯಜ್ಞ ಕುಂಡಗಳಿದ್ದು ಒಂದೊಂದು ಯಜ್ಞ ಕುಂಡಕ್ಕೆ ೧೧ ಋತ್ವಿಕರಿದ್ದು, ದಿನಕ್ಕೆ ೧೧ ಬಾರಿಯಂತೆ ೧೧ ದಿನಗಳ ಕಾಲ ನಮಕ ಮತ್ತು ಚಮಕಗಳಿಂದ ಕೂಡಿದ ರುದ್ರ ಪಠಣವನ್ನು ಒಟ್ಟು ೧೪೬೪೧ ಬಾರಿ ಮಾಡಲಾಗುತ್ತದೆ. ಇದು ಕೃಷ್ಣ ಯಜುರ್ವೇದದ ನಾಲ್ಕನೆ ಖಾಂಡದಲ್ಲಿ ಬರುವ ಮಂತ್ರವಾಗಿದೆ. ಪ್ರತಿ ರುದ್ರ ಪಠಣದಲ್ಲಿ ನಮಕದ ಹನ್ನೊಂದು ಅನುವಾಕಗಳನ್ನು ಮತ್ತು ಚಮಕದ ಒಂದು ಅನುವಾಕವನ್ನು ಪಠಿಸಲಾಗುತ್ತದೆ. ಹೀಗೆ ೧೧ ಬಾರಿ ಪಠಿಸಿದಾಗ ಅದನ್ನು ಏಕಾದಶ ರುದ್ರ ಎನ್ನುತ್ತಾರೆ.ಮುಂದುವರಿದು ೧೧ ಏಕಾದಶ ರುದ್ರ ಪಠಣೆ ಮಾಡಿದಾಗ ಅದನ್ನು ಲಘುರುದ್ರವೆಂದೂ, ಇದೇ ರೀತಿ ೧೧ ಲಘುರುದ್ರಗಳನ್ನು ಒಂದು ಮಹಾರುದ್ರವೆಂದೂ ಕರೆಯುತ್ತಾರೆ. ಮಹಾರುದ್ರದ ಹನ್ನೊಂದು ಬಾರಿ ಪಠಣವೇ ಅತಿರುದ್ರ.ಎನ್ನುತ್ತಾರೆ ಎಂದು ಹೇಳಿದರು .
ಈ ರುದ್ರ ಪಠಣದೊಂದಿಗೆ ೧೧ ಹೋಮಕುಂಡಗಳಲ್ಲಿ ೧೨೧ ವೈದಿಕರು ರುದ್ರಹೋಮವನ್ನು ಶ್ರದ್ಧಾ ಭಕ್ತಿಗಳಿಂದ ಕೈಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ರುದ್ರಾಭಿಷೇಕವೂ ರುದ್ರನಿಗೆ ಸಲ್ಲುತ್ತದೆ. ಈ ಎಲ್ಲವೂ ಒಟ್ಟು ಹನ್ನೊಂದು ದಿನಗಳ ಕಾಲ ಜರುಗಿ ೨೩ ರಂದು ಪೂರ್ಣಾಹುತಿಯೊಂದಿಗೆ ಸಮಾಪ್ತಿಗೊಳ್ಳುತ್ತವೆ.
ಕೊರೋನಾ ವೈರಸ್ ನಿಂದಾಗಿ ಸರ್ಕಾರದ ನಿಬಂದನೆಗಳಿಗೊಳಪಟ್ಟು ಪ್ರತಿನಿತ್ಯವೂ ನಡೆಯುವ ಸತ್ಸಂಗದಲ್ಲಿ ನಿಯಮಿತ ಸಂಖ್ಯೆಯಲ್ಲಿ ಗಣ್ಯರು, ಭಕ್ತರು, ಆಶ್ರಮ ವಾಸಿಗಳು ಪಾಲ್ಗೊಳ್ಳಲಿದ್ದಾರೆ. ಸತ್ಸಂಗದಲ್ಲಿ ಗಣ್ಯರಿಂದ ಹಾಗೂ ವಿದ್ವಾಂಸರಿಂದ ಉಪನ್ಯಾಸಗಳಿರುತ್ತವೆ. ಸದ್ಗುರು ಶ್ರೀ ಮದುಸೂಧನ ಸಾಯಿ ಅವರ ದಿವ್ಯೋಪನ್ಯಾಸದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ನವೆಂಬರ್ ೧೯ ರಿಂದ ೨೩ ರವರೆಗೆ ಅಂತರಾಷ್ಟ್ರೀಯ ಯುವ ಸಮ್ಮೇಳನ ಆಯೋಜಿಸಲಾಗಿದೆ