ಸಾಯಿ ಕ್ಯಾಟರಿಂಗ್‌ನ ಕಾರ್ಯಕ್ಕೆ ಶ್ಲಾಘನೆ

ಕೋಲಾರ,ಮೇ.೧೭: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅಡುಗೆ ಕೆಲಸವಿಲ್ಲದೇ ವಂಚಿತರಾಗಿದ್ದರೂ, ನಗರದಾದ್ಯಂತ ಕೆಲಸ ಮಾಡುವ ಪೊಲೀಸರ ದಾಹ ತಣಿಸುವ ಮೂಲಕ ಕೈಲಾದ ನೆರವು ಒದಗಿಸುವ ಹೃದಯವಂತಿಕೆಗೆ ನಗರದ ಸಾಯಿ ಕ್ಯಾಟರಿಂಗ್‌ನ ಮಂಜುನಾಥ್ ಸಾಕ್ಷಿಯಾಗಿದ್ದಾರೆ.
ಮದುವೆ,ಸಮಾರಂಭಗಳಿಗೆ ಅಡುಗೆ ಮಾಡಿಯೇ ಜೀವನ ನಡೆಸುವ ನಗರದ ಸಾಯಿ ಕ್ಯಾಟರಿಂಗ್‌ನ ಮಂಜುನಾಥ್, ಕೋವಿಡ್ ಲಾಕ್‌ಡೌನ್‌ನಿಂದ ಯಾವುದೇ ಕೆಲಸವಿಲ್ಲತೆ ಸಂಕಷ್ಟಕ್ಕೆ ಸಿಲುಕಿದ್ದರೂ ಕೈಲಾದಷ್ಟು ಕೋವಿಡ್ ವಾರಿಯರ್ಸ್‌ಗೆ ನೆರವಾಗುವ ಕಾಯಕವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.
ಮಂಜುನಾಥ್ ಕಳೆದ ಬಾರಿ ಕೋವಿಡ್ ಮೊದಲ ಅಲೆಯಲ್ಲಿ ಹಾಗೂ ಈಗ ಲಾಕ್ ಘೋಷಣೆಯಾದ ದಿನದಿಂದಲೇ ತಮ್ಮ ಕಾರಿನಲ್ಲಿ ಕೋವಿಡ್ ಕೆಲಸದಲ್ಲಿ ತೊಡಗಿರುವ ೧೫೦ಕ್ಕೂ ಹೆಚ್ಚು ಪೊಲೀಸರಿಗೆ ಕಾಫಿ, ನಿಂಬೆಜ್ಯೂಸ್, ಕಷಾಯ, ಮಜ್ಜಿಗೆ, ಟೀ, ಕಲ್ಲಂಗಡಿ ಜ್ಯೂಸ್ ಹೀಗೆ ದಿನಕ್ಕೊಂದನ್ನು ಆಯ್ಕೆ ಮಾಡಿ ತಯಾರಿಸಿ ನಗರಾದ್ಯಂತ ಸಂಚರಿಸಿ ಪೊಲೀಸರಿಗೆ ಉಚಿತವಾಗಿ ವಿತರಿಸುವ ಕಾಯಕವನ್ನು ಮಾಡುತ್ತಿದ್ದಾರೆ.
ಅಡುಗೆ ಕೆಲಸ ಇಲ್ಲ, ಆದರೂ ಸುಮ್ಮನಿರಲು ಮನಸ್ಸಾಗುತ್ತಿಲ್ಲ, ಕೋವಿಡ್ ತಡೆಗೆ ಶ್ರಮಿಸುತ್ತಿರುವ ಪೊಲೀಸರಿಗೆ ಟೀ,ಕಾಫಿ ಕುಡಿಯಲು ಅಂಗಡಿಗಳು ಬಂದ್ ಆಗಿವೆ, ಈಸಂದರ್ಭದಲ್ಲಿ ತಾವೇ ಟೀ,ಕಾಫಿ,ಜ್ಯೂಸ್ ತಯಾರಿಸಿ ಅವರಿಗೆ ನೀಡುವ ಮೂಲಕ ಸಮಾಜಕ್ಕೆ ನೆರವಾಗುವ ಇಚ್ಚೆಯಿಂದ ಈ ಕೆಲಸ ಮಾಡುತ್ತಿರುವುದಾಗಿ ತಿಳಿಸುತ್ತಾರೆ.
ಪೊಲೀಸ್ ಸಿಬ್ಬಂದಿ ಹೇಳುವಂತೆ ನಗರದ ಮೂರೂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಚರಿಸಿ ಪೊಲೀಸರಿಗೆ ಚಹಾ ನೀಡುವ ಮಂಜುನಾಥ್ ನಮ್ಮ ದಾಹ ತಣಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.