ಸಾಯಿಬಾಬಾ ಗುಡಿಯಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ

ಕೋಲಾರ, ಜು,೨೮-ನಗರದ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ವಾಸವಿ ಮಹಿಳಾ ಮಂಡಳಿ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಹತ್ತನೇ ದಿನದ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.
ಈ ಸಂದರ್ಭದಲ್ಲಿ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಉಮಾ ರವೀಂದ್ರನಾಥ್ ಮಾತನಾಡಿ, ಪ್ರತಿ ವರ್ಷ ಅಧಿಕಮಾಸದಲ್ಲಿ ೨೪ ದಿನಗಳು ೨೪ ದೇವಾಲಯಗಳಲ್ಲಿ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡುತ್ತಿದ್ದು, ಜುಲೈ ೧೮ ರಿಂದ ಪ್ರಾರಂಭಿಸಿ, ಹತ್ತನೇ ದಿನ ಶ್ರೀ ಸಾಯಿಬಾಬಾ ಮಂದಿರದಲ್ಲಿ ಇಂದು ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಿದ್ದೇವೆ ಎಂದರು.
ಪ್ರಸ್ತುತ ಈ ವರ್ಷ ಉತ್ತಮ ಮಳೆಯಾಗಿ, ಬೆಳೆಯಾಗಿ, ದೇಶ ಸಮೃದ್ಧಿ ಯಾಗಿರಲೆಂದು ದೇವರಲ್ಲಿ ವಾಸವಿ ಮಹಿಳಾ ಮಂಡಳಿಯ ನೂರಾರು ಮಹಿಳೆಯರು ಪ್ರಾರ್ಥಿಸಿದ್ದೇವೆ ಎಂದ ಅವರು, ಸಮಾಜದಲ್ಲಿ ಶಾಂತಿ ನೆಲಸಲಿ, ದುಷ್ಟರ ಅಂತ್ಯವಾಗಲಿ, ದೇಶ ಸುಭೀಕ್ಷವಾಗಲಿ ಎಂದು ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಿರುವುದಾಗಿ ತಿಳಿಸಿದರು.
ನಮ್ಮ ಪ್ರಯತ್ನಗಳು ಎಷ್ಟೇ ಇದ್ದರೂ, ದೇವರ ಆಶೀರ್ವಾದವೂ ಅಗತ್ಯವಿದೆ, ನಮ್ಮ ಹಿಂದೂ ಧರ್ಮದಲ್ಲಿ ದೇವರ ಮೇಲೆ ಇರುವ ನಂಬಿಕೆ ಉಳಿಯಬೇಕು, ದೇಶದಲ್ಲಿ ದೇವರ ಪೂಜೆ, ಆರಾಧನೆ ನಿರಂತರವಾಗಿ ನಡೆದು ಸಮಾಜದಲ್ಲಿ ಸಂಸ್ಕಾರ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶ್ರೀ ವಾಸವಿ ಮಹಿಳಾ ಮಂಡಳಿ ಕಾರ್ಯದರ್ಶಿ ಸತ್ಯಲಕ್ಷ್ಮಿ, ಸಹ ಕಾರ್ಯದರ್ಶಿ ಶೈಲಾ ಬದ್ರಿನಾಥ್, ಉಪಾಧ್ಯಕ್ಷೆ ಶ್ರೀದೇವಿ ಗುಪ್ತ, ಸದಸ್ಯರಾದ ವಿನುತಾ ಕೃಷ್ಣ, ವಾಣಿ ಬಾಲಾಜಿ, ವಿಜಯಲಕ್ಷ್ಮಿ ಮತ್ತಿತರರಿದ್ದರು.