ಸಾಮೂಹಿಕ ಹೋರಾಟದಿಂದ ಮಾಲವಿ ಜಲಾಶಯಕ್ಕೆ ನೀರು


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಜು.28 ಹಲವು ದಶಕಗಳ ಈ ಭಾಗದ ನೀರಾವರಿ ಯೋಜನೆಯಾಗಿದ್ದ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ತರುವ ಕಾರ್ಯಕ್ಕೆ ಪ್ರಥಮ ಹಂತದ ಪ್ರಾಯೋಗಿಕ ಪರೀಕ್ಷೆ ಆರಂಭವಾಗಿ ಯಶಸ್ವಿಯಾಗಿರುವುದು ಕ್ಷೇತ್ರದ ಜನತೆಗೆ ಸಂತಸ ತಂದಿರುವುದನ್ನು ಬಿಜೆಪಿ ಪಕ್ಷ ಸಂಭ್ರಮಿಸುತ್ತದೆ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೆ.ಹೆಚ್.ಮಲ್ಲಿಕಾರ್ಜುನ ನಾಯ್ಕ ಹೇಳಿದರು.
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಬುzವಾರ ಅವರು ಮಾತನಾಡಿ, ಈ ಭಾಗದ ರೈತರ ಜೀವನಾಡಿಯಾದ ಮಾಲವಿ ಜಲಾಶಯಕ್ಕೆ ನೀರೊದಗಿಸುವ ಯೋಜನೆ ಹಲವು ದಶಕಗಳಬೇಡಿಕೆಯಾಗಿತ್ತು. ಮಾಲವಿ ಜಲಾಶಯ ಅಭಿವೃದ್ಧಿಗಾಗಿ ತಾಲೂಕಿನ ರೈತರು, ಮಠಾಧೀಶರು, ವರ್ತಕರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿದ್ದವು.
ಹೋರಾಟಗಾರರ ಬೇಡಿಕೆಯಂತೆ ಮಾಜಿ ಸಿಎಂ ಸಿದ್ಧರಾಮಯ್ಯನವರು ಮಾಲವಿ ಜಲಾಶಯಕ್ಕೆ ಶಾಶ್ವತ ನೀರೊದಗಿಸುವ ಯೋಜನೆಗೆ 2017ರ ಬಜೆಟ್‍ನಲ್ಲಿ ಅನುಮೋದನೆ ನೀಡಿದ್ದರು. ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸಕಾರದಲ್ಲಿ ಯೋಜನೆಗೆ 25 ಕೋಟಿ ರೂ.ಗಳು ಅನುದಾನ ದೊರೆತಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಕೋವಿಡ್‍ನ ಸಂಕಷ್ಟದ ಸಮಯದಲ್ಲೂ ಸಹ ಈ ಯೋಜನೆಗೆ 95 ಕೋಟಿ ರೂಗಳ ಹಣ ಬಿಡುಗಡೆ ಮಾಡಿದ್ದರು. ಒಟ್ಟಾರೆಯಾಗಿ ಮಾಲವಿ ಜಲಾಶಯಕ್ಕೆ ನೀರು ತರುವ ಯೋಜನೆ ಪೂರ್ಣಗೊಳ್ಳುವಲ್ಲಿ ಬಿಜೆಪಿ ಪಕ್ಷದ ಕೊಡುಗೆ ಅಪಾರವಾದದ್ದು. ಆದರೆ ಇಲ್ಲಿ ಕೆಲವರು  ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯನವರು ಹಾಗೂ ಕಾಂಗ್ರೆಸ್ ಪಕ್ಷವೇ ಈ ಯೋಜನೆಗೆ ಕಾರಣ ಎಂಬಂತೆ ಸಾರ್ವಜನಿಕವಾಗಿ ಬಿಂಬಿಸುತ್ತಿರುವುದು ಸರಿಯಲ್ಲ. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಕಾಮಗಾರಿ ಪೂರ್ಣಗೊಂಡು ಯಶಸ್ವಿಯಾಗಿರುವದನ್ನು ಕ್ಷೇತ್ರದ ಎಲ್ಲಾ ಜನತೆ ಗಮನಿಸುತ್ತಿದ್ದಾರೆ.
ಮಾಲವಿ ಜಲಾಶಯದಲ್ಲಿ ಕುಡಿಯುವ ಬಳಕೆಗಾಗಿ 0.8ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಆದರೆ ಶಾಸಕರು ಅದೇ ನೀರಿನಲ್ಲಿ 25ಸಾವಿರ ಎಕರೆಯಷ್ಟು ಜಮೀನುಗಳನ್ನು ನಿರಾವರಿಯಾಗಿ ಪರಿವರ್ತಿಸುತ್ತೇನೆ ಎಂಬ ಮಾತುಗಳನ್ನು ಹೇಳುತ್ತಿರುವುದು ಕೇವಲ ಜನರ ದಾರಿ ತಪ್ಪಿಸುವ ತಂತ್ರವಾಗಿದೆ. ಆದರೆ ಪ್ರಜ್ಞಾವಂತ ಕ್ಷೇತ್ರದ ಜನತೆ ಇದನ್ನೆಲ್ಲಾ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಎಂಬುದನ್ನು ಅವರೇ ನಿರ್ಧರಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಜೋಗಿ ಹನುಮಂತಪ್ಪ, ಪುರಸಭೆ ಸದಸ್ಯರಾದ ನವೀನ್ ಕುಮಾರ್, ನಾಗರಾಜ ಜನ್ನು, ದೀಪಕ್ ಕಠಾರೆ, ವೀರೇಶ್, ಸುರೇಶ್ ಮುಖಂಡರಾದ ಸಂದೀಪ್ ಶಿವಮೊಗ್ಗ, ಈ.ಭರತ್, ಸೇರಿದಂತೆ ಮತ್ತಿತರರಿದ್ದರು.