
ಬೆಂಗಳೂರು, ಏ. ೧೨- ಜಯನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿರುವುದಾಗಿ ತೀವ್ರ ಆಕ್ರೋಶ ಹೊರಹಾಕಿರುವ ಬಿಜೆಪಿ ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷ ಎನ್.ಆರ್.ರಮೇಶ್, ನಾಳೆಯೊಳಗೆ ತೀರ್ಮಾನ ಪ್ರಕಟಿಸಿದೇ ಇದ್ದಲ್ಲಿ ಸಾಮೂಹಿಕ ರಾಜೀನಾಮೆಯ ಪರ್ವ ಆರಂಭವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ೧೮ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ೨೦೧೪ರಲ್ಲಿ ಚಿಕ್ಕಪೇಟೆ ಕ್ಷೇತ್ರದಲ್ಲಿ ನನಗೆ ಟಿಕೆಟ್ ಸಿಗುವುದು ಕೇಂದ್ರ ಸಚಿವರೊಬ್ಬರು ತಪ್ಪಿಸಿದರು.
ಈ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಸಂಘಟನಾ ಕಾರ್ಯ ಮಾಡಿದ್ದೇನೆ. ನಾನು ಅಲ್ಲಿನ ಪ್ರಬಲ ಆಕಾಂಕ್ಷಿ ಕೂಡ ಅನೇಕ ಸರ್ವೆಗಳಲ್ಲಿ ನನ್ನ ಹೆಸರೇ ಫೈನಲ್ ಆಗಿತ್ತು. ಆದರೆ, ನನಗೆ ಟಿಕೆಟ್ ತಪ್ಪಿಸಿರುವ ಹಿಂದೆ ಆರ್.ಅಶೋಕ್ ಹಾಗೂ ತೇಜಸ್ವಿ ಸೂರ್ಯ ಪಾತ್ರವಿದೆ ಎಂದು ದೂರಿದರು.
ನನಗೆ ಆಗಿರುವ ಅನ್ಯಾಯದ ಕುರಿತ ಪಕ್ಷದ ಹಿರಿಯರ ಗಮನಕ್ಕೆ ತಂದಿದ್ದೇನೆ. ಪಕ್ಷಕ್ಕೆ ನಾನು ಅನೇಕ ಕೆಲಸಗಳನ್ನು ಮಾಡಿದ್ದೇನೆ. ಅನೇಕ ಒತ್ತಡಗಳಿದ್ದರೂ, ನಾನು ಪಕ್ಷಕ್ಕಾಗಿ ದುಡಿದ್ದಿದ್ದೇನೆ. ನಾಳೆ ಬೆಳ್ಗಿಗೆ ೧೧ ಗಂಟೆ ರವರೆಗೂ ಡೆಡ್‌ಲೈನ್ ನೀಡಲಾಗಿದ್ದು, ಸಮಾಧಾನಕರ ಉತ್ತರ ಬಂದಿಲ್ಲವಾದರೆ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದರು.
ಪದ್ಮನಾಭನಗರದ ೧,೨೭೩ ಕಾರ್ಯಕರ್ತರಿಂದ ಬಿಜೆಪಿಗೆ ರಾಜೀನಾಮೆ ನೀಡಲಾಗಿದೆ. ಇತರೆ ವಾರ್ಡ್‌ಗಳಿಂದ ೨೦೦ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡಲಾಗಿದೆ ಎಂದ ಅವರು, ಬಿಜೆಪಿಯಿಂದ ಟಿಕೆಟ್ ಸಿಗದೇ ಹೋದರೆ ಪದ್ಮನಾಭನಗರದಿಂದಲೇ ಸ್ಪರ್ಧೆ ಖಚಿತ ಎಂದು ತಿಳಿಸಿದರು.